

ಮೈಸೂರು: ನಟಿ ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ ‘ಮಾರಕಾಸ್ತ್ರ’ ಸಿನಿಮಾ ಅ.6ರಂದು ತೆರೆಕಾಣಲಿದೆ.
ಸಿನಿಮಾದಲ್ಲಿ ಗಾಯಕ ವಿಜಯಪ್ರಕಾಶ್ ಹಾಡಿರುವ ಜೈ ಹನುಮಾನ್ ಗೀತೆಯನ್ನು ನಗರದ ಪತ್ರಕರ್ತರ ಭವನದಲ್ಲಿ ಚಿತ್ರತಂಡ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು.
ನಟಿ ಹರ್ಷಿಕಾ ಪೂಣಚ್ಚ, ನಾಯಕ ನಟ ಆನಂದ್ ಆರ್ಯ, ನಟ ಮೈಕೋ ನಾಗರಾಜ್, ನಿರ್ದೇಶಕ ಗುರುಮೂರ್ತಿ, ಚಿತ್ರ ಸಾಹಿತಿ ಮಂಜುಕವಿ ಮಾತನಾಡಿ, ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಕೋರಿದರು.
ಚಿತ್ರದ ನಿರ್ಮಾಪಕ ಡಾ.ವಿ.ನಟರಾಜು ಮಾತನಾಡಿ, ಸಿನಿಮಾದ ಹಾಡುಗಳ ಚಿತ್ರೀಕರಣಕ್ಕಾಗಿ ವಿದೇಶಗಳಿಗೆ ಹೋಗುವ ಪ್ರಯತ್ನ ಮಾಡದೆ ಭಾರತದಲ್ಲೇ ಚಿತ್ರೀಕರಣ ಮಾಡಲಾಗಿದೆ. ಅತ್ಯದ್ಭುತ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ಮಾಡುವ ಮೂಲಕ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಕಾವೇರಿ ವಿಷಯದ ಕುರಿತು ಮಾತನಾಡಿದ ನಟಿ ಹರ್ಷಿಕಾ ಪೂಣಚ್ಚ, ಮೊದಲು ನಮ್ಮ ಮಕ್ಕಳ ಹೊಟ್ಟೆ ತುಂಬಿಸಿ ನಂತರ ಬೇರೆಯವರ ಹೊಟ್ಟೆ ತುಂಬಿಸಬೇಕು. ಈ ಬಾರಿ ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ ಎಂದು ಹೇಳಿದರು.