6ನೇ ಯತ್ನದಲ್ಲಿ ಸಿಕ್ತು ವೈದ್ಯ ಸೀಟು

Anas Sanman At Shaheen College Photo(1)
Published on

ಬೀದರ್: ಇಲ್ಲಿನ ಶಾಹೀನ್ ಶಿಕ್ಷಣ ಸಂಸ್ಥೆ ಅಭಯದಿಂದ ಉತ್ತರಪ್ರದೇಶದ ವಿದ್ಯಾರ್ಥಿಯೊಬ್ಬ 6ನೇ ಯತ್ನದಲ್ಲಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದು ಡಾಕ್ಟರ್ ಆಗುವ ಕನಸು ನನಸಾಗಿಸಿಕೊಂಡಿದ್ದಾರೆ.

ಕಾಲೇಜಿನಲ್ಲಿ ವಸತಿಸಹಿತ ದೀರ್ಘ ಕಾಲದ ನೀಟ್ ರಿಪಿಟರ್ ತರಬೇತಿ ಪಡೆದ ಮುಜಾಫರ್ನಗರ ಜಿಲ್ಲೆಯ ಕುತೆಸ್ರಾ ಗ್ರಾಮದ ಮಹ್ಮದ್ ಅನಸ್ ತಮ್ಮ 6ನೇ ಪ್ರಯತ್ನದಲ್ಲಿ ಪ್ರಸಕ್ತ ನೀಟ್ನಲ್ಲಿ 663 ಅಂಕ (1876ನೇ ರ್ಯಾಂಕ್) ಗಳಿಸಿದ್ದಾರೆ. ಛಲವಿದ್ದರೆ ಸಾಧನೆ ಖಚಿತ ಎಂಬುದು ಸಹ ತೋರಿಸಿ ಗಮನ ಸೆಳೆದಿದ್ದಾರೆ.
ಸಣ್ಣ ರೈತನ ಪುತ್ರ ಅನಸ್ ಪಿಯುಸಿಯಲ್ಲಿ ಶೇ.60.2 ರಷ್ಟು ಅಂಕ ಪಡೆದಿದ್ದರು. 2015 ರಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ಪ್ರವೇಶ ಪಡೆದು, ವೈದ್ಯಕೀಯ ಕೋಸ್೯ ಗಾಗಿ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (ಎಐಪಿಎಂಟಿ) ಬರೆದರು. ಆದರೆ ಫಲ ನೀಡಿಲ್ಲ. 2016ರಲ್ಲಿ, 2017 ರಲ್ಲಿ ನೀಟ್ ಪರೀಕ್ಷೆ ಬರೆದರೂ ಪ್ರವೇಶ ಸಿಗುವಷ್ಟು ಅಂಕ ಬರಲಿಲ್ಲ. ಬಿಎಸ್ಸಿ ತೃತೀಯ ವರ್ಷಕ್ಕೆ ಬಂದರೂ ನೀಟ್ ಪಾಸ್ ಆಗದಿರುವುದು ಬೇಸರ ತಂದಿತು. ವೈದ್ಯನಾಗುವ ಕನಸು ಕಮರುತ್ತಿತ್ತು. ಆಗ ಉತ್ತರಪ್ರದೇಶದ ವಿದ್ಯಾರ್ಥಿಯೊಬ್ಬರಿಂದ ಮಾಹಿತಿ ಪಡೆದು ನೀಟ್ ತರಬೇತಿಗೆ ಶಾಹೀನ್ಗೆ ಬಂದರು. ಈಗ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಪಡೆಯುವ ಸಂಭ್ರಮದಲ್ಲಿದ್ದಾರೆ.

ಇಲ್ಲಿ 2018ರಲ್ಲಿ ನೀಟ್ನಲ್ಲಿ 333 ಅಂಕ ಬಂದವು. ಆದರೆ ಸೀಟು ಸಿಗಲಿಲ್ಲ. 2019ರಲ್ಲಿ ಮತ್ತೆ ನೀಟ್ಗೆ ಹಾಜರಾದಾಗ 531 ಅಂಕ ಬಂದು ಆತ್ಮವಿಶ್ವಾಸ ಹೆಚ್ಚಿಸಿತು. ಆದರೆ ಉತ್ತರಪ್ರದೇಶದಲ್ಲಿ 575 ಮೇಲ್ಪಟ್ಟು ಅಂಕ ಪಡೆದವರಿಗೆ ಮಾತ್ರ ಸೀಟು ಲಭಿಸಿತು. ಹಠ ಬಿಡದ ಅವರು, 2020ರಲ್ಲಿ ಮತ್ತೆ ನೀಟ್ ತರಬೇತಿ ಪಡೆದು ಪರೀಕ್ಷೆ ಬರೆದಿದ್ದು, 663 ಅಂಕ ಗಳಿಸಿ ಕೊನೆಗೂ ವೈದ್ಯಕೀಯ ಕೋಸ್೯ ಕದ ತಟ್ಟಿದ್ದಾರೆ. ಆರು ವರ್ಷದ ಶ್ರಮ ಫಲ ನೀಡಿದೆ.

ಶಾಹೀನ್ ಸಂಸ್ಥೆ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ಒಂದು ವರ್ಷ ಉಚಿತ ನೀಟ್ ತರಬೇತಿ ಕೊಟ್ಟರು. ಕಾಲೇಜಿನಲ್ಲಿ ದೊರೆತ ಉತ್ಕೃಷ್ಟ ತರಬೇತಿಯಿಂದಾಗಿ ನನ್ನ ಆಸೆ ಈಡೇರಿದೆ ಎಂದು ಅನಸ್ ಸಂತಸದಿಂದ ಹೇಳುತ್ತಾರೆ. ಅನಸ್ ಛಲ ಬಿಡದ ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿ ಎಂದು ಖದೀರ್ ಹೇಳಿದರು. ಸಾಧಕ್ ಅನಸ್ಗೆ ಗುರುವಾರ ಸಂಸ್ಥೆಯಲ್ಲಿ ಖದೀರ್ ಅವರು ಸನ್ಮಾನಿಸಿ, ಬೆನ್ನು ತಟ್ಟಿದರು. ವಿದ್ಯಾರ್ಥಿ ತಂದೆ ಮಹ್ಮದ್ ಕಾಮಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net