ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನ.6 ಕಡೇ ದಿನ

dc meeting
ನೈಋತ್ಯ ಪದವೀಧರರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಂಬಂಧ ಡಾ.ಆರ್.ಸೆಲ್ವಮಣಿ ರಾಜಕೀಯ ಪಕ್ಷಗಳ ಪ್ರಮುಖ ಸಭೆ ನಡೆಸಿದರು. ಡಿ.ಎಸ್.ಅರುಣ್, ಸಿದ್ದಲಿಂಗ ರೆಡ್ಡಿ, ಚಂದನ್, ರಮೇಶ್ ಶಂಕರಘಟ್ಟ ಇದ್ದರು.
Published on

ಶಿವಮೊಗ್ಗ: ನೈಋತ್ಯ ಪದವೀಧರರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನ.6 ಅಂತಿಮ ದಿನ. ಈ ಬಾರಿ ಒಂದು ಲಕ್ಷ ಮತದಾರರನ್ನು ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ, ಕಳೆದ ಚುನಾವಣೆಗೂ ಮುನ್ನ 27 ಸಾವಿರ ಮತದಾರರನ್ನು ಮಾತ್ರ ಪಟ್ಟಿಗೆ ಸೇರಿಸಲಾಗಿತ್ತು ಎಂದು ಹೇಳಿದರು.
ಪದವೀಧರರು ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳು, ಶಿಕ್ಷಣ ಇಲಾಖೆ ಮುಖ್ಯಸ್ಥರು, ಶಾಲಾ ಆಡಳಿತ ಮಂಡಳಿಯವರ ಸಭೆ ನಡೆಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಸೂಚಿಸಲಾಗುವುದು. ರಾಜಕೀಯ ಪಕ್ಷಗಳ ಏಜೆಂಟರನ್ನು ನೇಮಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಸಹಕಾರ ನೀಡಬೇಕೆಂದರು.
ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಕಾಂಗ್ರೆಸ್ ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ, ಕಾಂಗ್ರೆಸ್ ಮುಖಂಡ ಚಂದನ್ ಮುಂತಾದವರು ಸಭೆಯಲ್ಲಿದ್ದರು.
ಪಧವೀಧರ ಕ್ಷೇತ್ರದ ಮತದಾನಕ್ಕೆ ಅರ್ಹತೆ: ಪದವೀಧರರ ಕ್ಷೇತ್ರದ ಮತದಾರ ಪಟ್ಟಿಗೆ ಹೆಸರು ನೋಂದಾಯಿಸುವವರು 2023ರ ನವೆಂಬರ್ 1ಕ್ಕೆ ಅನ್ವಯವಾಗುವಂತೆ ಮೂರು ವರ್ಷಗಳ ಹಿಂದಿನ ದಿನಾಂಕಕ್ಕೆ ದೇಶದ ಯಾವುದೇ ಅಂಗೀಕೃತ ವಿವಿಯಿಂದ ಪದವಿ ಪ್ರಮಾಣಪತ್ರ ಪಡೆದಿರಬೇಕು. ನೈಋತ್ಯ ಪದವೀಧರ ಕ್ಷೇತ್ರದ ನಿವಾಸಿಯಾಗಿರಬೇಕು. ಅರ್ಜಿ ನಮೂನೆ-18, ಪದವಿ ಪ್ರಮಾಣಪತ್ರ, ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿಯಾಗಿದ್ದಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ದೃಢೀಕರಿಸಿದ ಮಾಹಿತಿ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್, ಸಾಮಾನ್ಯ ನಿವಾಸಿ ದಾಖಲೆಗಳನ್ನು ಇತ್ತೀಚಿನ ಭಾವಚಿತ್ರದೊಂದಿಗೆ ದೃಢೀಕರಿಸಿ, ತಾಲೂಕು, ನಗರಪಾಲಿಕೆ ಮತ್ತು ನಗರಸಭೆಗಳಲ್ಲಿ ತೆರೆಯಲಾದ ಕೌಂಟರ್‌ಗಳಲ್ಲಿ ಸಲ್ಲಿಸಬೇಕು.
ಶಿಕ್ಷಕರ ಕ್ಷೇತ್ರದ ಮತದಾನಕ್ಕೆ ಅರ್ಹತೆ: ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವ ಶಿಕ್ಷಕರು 2023ರ ನವೆಂಬರ್ 1ಕ್ಕೆ ಅನ್ವಯಗೊಳ್ಳುವಂತೆ ಆರು ವರ್ಷಗಳ ಹಿಂದಿನ ದಿನಾಂಕಕ್ಕೆ ಅಂದರೆ, 2017ರ ಅಕ್ಟೋಬರ್ ನಂತರದಲ್ಲಿ ಮೂರು ವರ್ಷಗಳು ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಕುರಿತು ನಮೂನೆ-19ರ ಜತೆಗೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದು, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಸೇರಿದಂತೆ ಯಾವುದೇ ಸಾಮಾನ್ಯ ನಿವಾಸಿ ದಾಖಲೆಗಳನ್ನು ಇತ್ತೀಚಿನ ಭಾವಚಿತ್ರದೊಂದಿಗೆ ದೃಢೀಕರಿಸಿ, ತಾಲೂಕು, ನಗರಪಾಲಿಕೆ ಮತ್ತು ನಗರಸಭೆಗಳಲ್ಲಿ ತೆರೆಯಲಾದ ಕೌಂಟರುಗಳಲ್ಲಿ ಸಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net