ಅಮೆರಿಕದಲ್ಲೂ ಗೀತಾಚಾರ್ಯ ಶ್ರೀಕೃಷ್ಣನ ಆರಾಧನೆ...!

America Lead
Published on

ಡಲ್ಲಾಸ್​ನ ಪುತ್ತಿಗೆ ಮಠದಲ್ಲಿ ವಾರ್ಷಿಕೋತ್ಸವ

ಭಕ್ತರಿಂದ ಶ್ರೀನಿವಾಸ ಕಲ್ಯಾಣ ಮಹೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿಶ್ವಾದ್ಯಂತ ಶ್ರೀಕೃಷ್ಣ ಭಕ್ತಿ ಹಾಗೂ ಭಗವದ್ಗೀತೆಯ ಶಾಶ್ವತ ಪ್ರಚಾರಕ್ಕಾಗಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ವಿವಿಧ ದೇಶಗಳಲ್ಲಿ ಮಠ ನಿರ್ಮಿಸಿದ್ದಾರೆ. ಅವುಗಳಲ್ಲಿ ಒಂದಾದ ಅಮೆರಿಕದ ಟೆಕ್ಸಾಸ್​ ರಾಜ್ಯದ ಡಲ್ಲಾಸ್​ ಮಹಾನಗರದಲ್ಲಿರುವ ಮಠದಲ್ಲಿ 6ನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಲಾಯಿತು.

ವೈಭವದಿಂದ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಸೇವೆಯಲ್ಲಿರುವ ಪುತ್ತಿಗೆ ಶ್ರೀಪಾದರು ಆನ್​ಲೈನ್​ ಮೂಲಕವೇ ಆಶೀರ್ವಚನ ನೀಡಿ, ಭಕ್ತರಿಗೆ ಹರಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ

ಅಮೆರಿಕದ ಈ ಮಠದಲ್ಲೂ ಉಡುಪಿ ಶ್ರೀಕೃಷ್ಣನ ಮೂರ್ತಿ, ಮುಖ್ಯಪ್ರಾಣ ಮತ್ತು ಗುರು ರಾಯರ ಮೃತ್ತಿಕಾ ಬೃಂದಾವನವನ್ನೂ ಶ್ರೀಗಳು ಸ್ಥಾಪಿಸಿದ್ದಾರೆ. ವಾರ್ಷಿಕೋತ್ಸವದ ನಿಮಿತ್ತ 108 ಕಲಶಾಭಿಷೇಕ, ಮಹಾಪೂಜೆ, ಶ್ರೀನಿವಾಸ ಕಲ್ಯಾಣ ಮಹೋತ್ಸವ, ಮಹಾ ಅನ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಂಗಪೂಜೆ ನಡೆದವು. ಪ್ರಧಾನ ಅರ್ಚಕ ಕುಕ್ಕೆಹಳ್ಳಿ ವಾದಿರಾಜ ಭಟ್​ ನೇತೃತ್ವದಲ್ಲಿ ಅನೇಕ ಋತ್ವಿಜರು ಧಾರ್ಮಿಕ ವಿಧಾನ ನೆರವೇರಿಸಿದರು.

ಅಮೆರಿಕದ ಮಠದಲ್ಲೂ ಸಹ ಉಡುಪಿಯಲ್ಲಿ ನಡೆಯುವಂತೆಯೇ ಕಾರ್ಯಕ್ರಮ ನೆರವೇರಿತ್ತು ಎಂದು ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net