

ಚಿಕ್ಕಬಳ್ಳಾಪುರ: ವ್ಯಾಪಕವಾಗಿ ಹರಡುತ್ತಿರುವ ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿರುವ ಶಿಕ್ಷಣ ಇಲಾಖೆಯು ಶಿಕ್ಷಕರು ಎಂದಿನಂತೆ ಕಾರ್ಯ ನಿರ್ವಹಿಸಲು ಸೂಚಿಸಿದೆ.
ಎಲ್‌ಕೆಜಿಯಿಂದ 6ನೇ ತರಗತಿವರೆಗಿನ ಮಕ್ಕಳಿಗೆ ಮಾ.14 ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. 7, 8, 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಆಗಮಿಸಿ ಪರೀಕ್ಷೆ ಬರೆಯಬೇಕು. 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅಧ್ಯಯನ ರಜೆ ನೀಡಿ, ನಿಗದಿತ ದಿನದಂದು ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಮದುವೆ, ಸಾರ್ವಜನಿಕ ಸಭೆ-ಸಮಾರಂಭಗಳು, ಜಾತ್ರೆ, ಹುಟ್ಟು ಹಬ್ಬ ಆಚರಿಸದಿರಲು ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳ ಮುಖ್ಯಸ್ಥರಿಗೆ, ಚಿತ್ರಮಂದಿರಗಳನ್ನು ಮುಚ್ಚಲು ಮಾಲೀಕರಿಗೆ ಜಿಲ್ಲಾಡಳಿತ ಸೂಚಿಸಿದೆ.
ನಂದಿ ಗಿರಿಧಾಮಕ್ಕೂ ನಿಷೇಧ: ನಂದಿ ಗಿರಿಧಾಮಕ್ಕೂ ಮಾ.14 ರಿಂದ ಮಾ.21 ರವರೆಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ. ಪ್ರತಿದಿನ ದೇಶ-ವಿದೇಶಗಳಿಂದ ಜನರು ಆಗಮಿಸುತ್ತಾರೆ. ಇದಕ್ಕೆ ಕರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರವೇಶ ನಿಷೇಧಿಸಲಾಗಿದೆ.
ಎಚ್ಚರ ವಹಿಸಲು ಡಿಸಿ ಸೂಚನೆ: ಕರೊನಾ ಬಗ್ಗೆ ಸಾರ್ವಜನಿಕರಿಗೆ ಇರುವ ಆತಂಕ ನಿವಾರಿಸಲು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಲತಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಕರೊನಾ ನಿಯಂತ್ರಣ ಬಗ್ಗೆ ಚರ್ಚೆಯ ತುರ್ತು ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದೇಶಗಳಿಂದ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಊರಿಗೆ ಬಂದಲ್ಲಿ ಜನರು ಮಾಹಿತಿ ನೀಡಬೇಕು. ಆಯಾ ವ್ಯಾಪ್ತಿಯ ತಾಲೂಕು ವೈದ್ಯಾಧಿಕಾರಿಗಳು ಆರೋಗ್ಯ ತಪಾಸಣೆ ಮಾಡಿ, 14 ದಿನ ಅವರ ಮನೆಯಲ್ಲಿಯೇ ನಿಗಾ ವಹಿಸಲಿದ್ದಾರೆ ಎಂದರು. ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆಸ್ಪತ್ರೆ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಹಾಸಿಗೆ ಮೀಸಲಿಟ್ಟು ಐಸೋಲೆಟೆಡ್ ವಾರ್ಡ್‌ಗಳನ್ನು ತೆರೆಯಲಾಗಿದೆ ಎಂದರು. ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎಂ ಯೋಗೇಶ್ ಗೌಡ ಮತ್ತಿತರರು ಇದ್ದರು.