ರಾಜ್ಯದ ರೈಲ್ವೆಗೆ 6,900 ಕೋಟಿ ರೂ. ಅನುದಾನ: ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 40 ಹೆಚ್ಚಳ

railway
Published on

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್​ನಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ 6,900 ಕೋಟಿ ರೂ. ಅನುದಾನ ಲಭಿಸಿದ್ದು, ಇದರಲ್ಲಿ ಕರ್ನಾಟಕದ ಪಾಲಿಗೇ 6 ಸಾವಿರ ಕೋಟಿ ರೂ. ದೊರಕಿದೆ. ನೈಋತ್ಯ ರೈಲ್ವೆಗೆ ಈವರೆಗೆ ದೊರೆತ ಅತಿ ಹೆಚ್ಚಿನ ಅನುದಾನ ಇದಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರ ಜೋಡಿಸಿಕೊಡಬೇಕಿರುವ 780 ಕೋಟಿ ರೂ. ಸೇರಿದೆ. 2020-21ನೇ ಸಾಲಿನ ಬಜೆಟ್​ನಲ್ಲಿ ನೈಋತ್ಯ ರೈಲ್ವೆಗೆ 4,900 ಕೋಟಿ ರೂ. ಲಭಿಸಿತ್ತು. ಈ ಬಾರಿ ಶೇ. 40 ಹೆಚ್ಚು ಅನುದಾನ ಸಿಕ್ಕಿದೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದಕ್ಕೆ ಎಷ್ಟು?: ಹೊಸ ಮಾರ್ಗ ಅಳವಡಿಕೆಗೆ 323 ಕೋಟಿ ರೂ., ಡಬ್ಲಿಂಗ್​ಗೆ 1,455 ಕೋಟಿ ರೂ. ಹಾಗೂ ವಿದ್ಯುದಿಕರಣಕ್ಕೆ 611 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು. ಕಳೆದ ಬಾರಿ ವಿದ್ಯುದಿಕರಣಕ್ಕೆ 492.18 ಕೋಟಿ ರೂ. ದೊರಕಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 24.14ರಷ್ಟು ಹೆಚ್ಚಿನ ಆಥಿರ್ಕ ನೆರವು ದೊರಕಿದೆ ಎಂದು ಸಂಜೀವ ಕಿಶೋರ ಮಾಹಿತಿ ನೀಡಿದರು.

ಈ ಬಾರಿಯ ಒಟ್ಟು ಅನುದಾನದಲ್ಲಿ 6,226 ಕೋಟಿ ರೂ.ಗಳನ್ನು ಮೂಲ ಸೌಲಭ್ಯ ಅಳವಡಿಕೆ ಹಾಗೂ ರೈಲು ಸುರಕ್ಷತೆಗೆ ಉಪಯೋಗಿಸ ಲಾಗುವುದು. ಕಳೆದ ಬಾರಿ ಮೂಲ ಸೌಲಭ್ಯ ಹಾಗೂ ಸುರಕ್ಷತೆಗೆ 4,600 ಕೋಟಿ ರೂ.ಗಳನ್ನು ಬಳಸಲಾ ಗಿತ್ತು. ಈ ಬಾರಿ ಶೇ. 35ರಷ್ಟು ಹೆಚ್ಚಿನ ಅನುದಾನ ಉಪಯೋಗಿಸಲಾಗುವುದು.

ವಲಯದ ಡಿಜಿಎಂ ಪಿ.ಕೆ. ಮಿಶ್ರಾ, ಸಿಎಸ್​ಟಿಇ ಇ. ವಿಜಯಾ, ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಅನೀಶ ಹೆಗಡೆ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಬೆಂಗಳೂರಿಗೆ 450 ಕೋಟಿ ರೂ. ಮೀಸಲು

ಬೆಂಗಳೂರು ನಗರದ ರೈಲ್ವೆ ಯೋಜನೆಗಳಿಗೆ 450 ಕೋಟಿ ರೂ. ಮೀಸಲಿಡಲಾಗಿದ್ದು, ಕಳೆದ ಬಾರಿಗಿಂತ ಶೇ. 50 ಹೆಚ್ಚಿನ ಪಾಲು ಲಭಿಸಿದೆ. ವಲಯ ವ್ಯಾಪ್ತಿಯ ರೈಲು ಹಳಿಗಳ ಅಭಿವೃದ್ಧಿಗೆ 625 ಕೋಟಿ ರೂ., ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕೆ (ಈಗಾಗಲೇ ನಿರ್ಮಾಣ ಹಂತದಲ್ಲಿ ಇರುವ ಮತ್ತು ಹೊಸ ಸೇತುವೆ ಸೇರಿ) 254.46 ಕೋಟಿ ರೂ. ಬಳಕೆಯಾಗಲಿದೆ.

ಕೇಂದ್ರ ಸರ್ಕಾರ 3 ವರ್ಷಗಳಲ್ಲಿ 400 ಹೊಸ ವಂದೇ ಭಾರತ ರೈಲುಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಇದರಲ್ಲಿ ನೈಋತ್ಯ ರೈಲ್ವೆಗೂ ಕೆಲ ರೈಲುಗಳು ದೊರೆಯುವ ನಿರೀೆ ಇದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧಾರವಾಡ - ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸಂಚಾರ ಪ್ರಾರಂಭಿಸುವಂತೆ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಬೆಂಗಳೂರು-ಧಾರವಾಡ ಮಧ್ಯೆ ದ್ವಿಪಥ ಮಾರ್ಗ ಹಾಗೂ ವಿದ್ಯುದಿಕರಣ ಕಾಮಗಾರಿ ಪೂರ್ಣಗೊಂಡ ನಂತರ ರೈಲು ಸಂಚಾರ ಪ್ರಾರಂಭಿಸಬಹುದು ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ  ನಿರ್ದೇಶಕ ಸಂಜೀವ ಕಿಶೋರ ವ್ಯವಸ್ಥಾಪಕ ಹೇಳಿದರು.

ವಲಯವಾರು ವಿವರ

* ಧಾರವಾಡ - ಕಿತ್ತೂರು ಮಧ್ಯೆ ಹೊಸ ಮಾರ್ಗ ಅಳವಡಿಕೆಗೆ 20 ಕೋಟಿ ರೂ., ಧಾರವಾಡ - ಕಿತ್ತೂರು - ಬೆಳಗಾವಿ ಹೊಸ ರೈಲು ಮಾರ್ಗದ ಯೋಜನೆಗೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯವನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ

* ಗದಗ - ವಾಡಿ ಹೊಸ ಮಾರ್ಗ ಯೋಜನೆಗೆ 187 ಕೋಟಿ ರೂ. ಬಿಡುಗಡೆ. ಶಿವಮೊಗ್ಗ - ಶಿಕಾರಿಪುರ - ರಾಣೆಬೆನ್ನೂರು, ತುಮಕೂರು - ಚಿತ್ರದುರ್ಗ - ದಾವಣಗೆರೆ, ಬಾಗಲಕೋಟೆ - ಕುಡಚಿ ಮಾರ್ಗಗಳಿಗೆ ತಲಾ 50 ಕೋಟಿ ರೂ.

* ಕಲ್ಯಾಣದುರ್ಗ ಮಾರ್ಗವಾಗಿ ರಾಯದುರ್ಗ - ತುಮಕೂರು ಯೋಜನೆಗೆ 100 ಕೋಟಿ ರೂ. ನೀಡಲಾಗಿದೆ.

* ಗದಗ- ಕುಡಗಿ - ಹೊಟಗಿ ಡಬ್ಲಿಂಗ್​ ಯೋಜನೆಗೆ 200 ಕೋಟಿ ರೂ.

* ಹುಬ್ಬಳ್ಳಿ - ಚಿಕ್ಕಜಾಜೂರು ಡಬ್ಲಿಂಗ್​ಗೆ 210 ಕೋಟಿ ರೂ. ಮಂಜೂರು

* ಯಶವಂತಪುರ - ಚೆನ್ನಸಂದ್ರ ಮಾರ್ಗ ಡಬ್ಲಿಂಗ್​ಗೆ 115 ಕೋಟಿ ರೂ., ಯಲಹಂಕ - ಪೆಣುಕೊಂಡ ಡಬ್ಲಿಂಗ್​ಗೆ 54 ಕೋಟಿ ರೂ., ಪೆಣುಕೊಂಡ - ಧರ್ಮಾವರಂ ಡಬ್ಲಿಂಗ್​ಗೆ 60 ಕೋಟಿ ರೂ., ಬೈಯಪ್ಪನಹಳ್ಳಿ - ಹೊಸೂರು ಡಬ್ಲಿಂಗ್​ಗೆ 140 ಕೋಟಿ ರೂ., ಅರಸಿಕೆರೆ - ತುಮಕೂರು ಡಬ್ಲಿಂಗ್​ಗೆ 51.8 ಕೋಟಿ ರೂ.

* ಹುಬ್ಬಳ್ಳಿ - ಬೆಂಗಳೂರು ಮಾರ್ಗ ಡಬ್ಲಿಂಗ್​ ಕಾಮಗಾರಿ ಇದೇ ಡಿಸೆಂಬರ್​ನಲ್ಲಿ ಹಾಗೂ ವಿದ್ಯುದಿಕರಣ ಕಾಮಗಾರಿ 2023ರ ಜೂನ್​ನಲ್ಲಿ ಪೂರ್ಣ

* ಲೋಂಡಾ - ಮಿರಜ್​ ಡಬ್ಲಿಂಗ್​ ಕಾಮಗಾರಿ 2023ರ ಮಾರ್ಚ್​ನಲ್ಲಿ ಹಾಗೂ ನಂತರದ ಐದಾರು ತಿಂಗಳಲ್ಲಿ ವಿದ್ಯುದಿಕರಣ ಕಾಮಗಾರಿ ಪೂರ್ಣಗೊಳಿಸುವ ಗುರಿ

* ವಂದೇ ಮಾತರಂ ರೈಲು ಸಂಚರಿಸಬೇಕಾದರೆ ಇಲೆಕ್ಟ್ರಿಫಿಕೇಶನ್​ ಮಾರ್ಗ ಅಗತ್ಯ

* ಹುಬ್ಬಳ್ಳಿ - ವಾಸ್ಕೊ ಮಧ್ಯೆವಿಸ್ಟಾಡೋಮ್​ ಬೋಗಿ ಪರಿಚಯಿಸುವ ಬಗ್ಗೆ ಯೋಚನೆ

* ಬರುವ ಮಾರ್ಚ್​ ಒಳಗಾಗಿ 22 ಕಿಮೀ ಉದ್ದದ ಹೊಸ ಮಾರ್ಗ ಅಳವಡಿಕೆ ಕಾಮಗಾರಿ ಹಾಗೂ 61 ಕಿಮೀ ಉದ್ದದ ಬ್ಲಿಂಗ್​ ಕಾಮಗಾರಿ ಪೂರ್ಣ

* ನೈಋತ್ಯ ರೈಲ್ವೆಯ 3,605 ಕಿಮೀ ಉದ್ದದ ಮಾರ್ಗ ದಲ್ಲಿ ಈಗಾಗಲೇ 1,454 ಕಿಮೀ (ಶೇ. 40) ಮಾರ್ಗದಲ್ಲಿ ವಿದ್ಯುದಿಕರಣ ಪೂರ್ಣಗೊಂಡಿದೆ. ಬರುವ ಆಥಿರ್ಕ ವರ್ಷದಲ್ಲಿ 554 ಕಿಮೀ ಮಾರ್ಗದಲ್ಲಿ ಇಲೆಕ್ಟ್ರಿಫಿಕೇಶನ್​ ಕಾಮಗಾರಿ ಪೂರ್ಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net