

ರಟ್ಟಿಹಳ್ಳಿ: ಮದಗ-ಮಾಸೂರ ಕೆರೆಯಿಂದ ಎಡ ಮತ್ತು ಬಲದಂಡೆ ಕಾಲುವೆ ಆಧುನೀಕರಣಕ್ಕೆ ಸಂಬಂಧಿಸಿ 69 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದಲ್ಲಿ ತುಂಗಾ ಮೇಲ್ದಂಡೆ ಕಾಲುವೆಗೆ ಶುಕ್ರವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಭೂಸ್ವಾಧೀನ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ತರಲಾಗಿದೆ ಎಂದರು.
ತುಂಗಾ ಮೇಲ್ದಂಡೆ ಕಾಲುವೆ ಕಳೆದ ಐದಾರು ವರ್ಷಗಳಿಂದ ಅಭಿವೃದ್ದಿ ಕಂಡಿಲ್ಲ. ಮುಂಬರುವ ದಿನಗಳಲ್ಲಿ ಕಾಲುವೆಯಲ್ಲಿ ನೀರು ಬರಿದಾದ ಬಳಿಕ ಎಲ್ಲಿ ದುರಸ್ತಿ ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, 1984ರಲ್ಲಿ ತುಂಗಾ ಮೇಲ್ದಂಡೆ ಯೋಜನೆಗಾಗಿ ಹೋರಾಟ ಆರಂಭಿಸಿದಾಗ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸತತ ಹೋರಾಟದ ಫಲ ರೈತರಿಗೆ ದೊರಕಿದೆ ಎಂದರು.
ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾಲುವೆ ನಿರ್ಮಾಣಕ್ಕೆ ರೈತರು ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಇದರಿಂದ ಉಪಕಾಲುವೆಗಳು ನಿರ್ಮಾಣವಾಗಿ ಜಮೀನುಗಳಿಗೆ ನೀರು ಹರಿಯಲಿದೆ ಎಂದರು.
ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ರವೀಂದ್ರ ಮುದಿಯಪ್ಪನವರ, ಮಹೇಶ ಗುಬ್ಬಿ, ನಾಗನಗೌಡ ಕೋಣ್ತಿ, ಅನ್ನಪೂರ್ಣಮ್ಮ ಬಣಕಾರ, ಪಿ.ಡಿ. ಬಸನಗೌಡ್ರ, ಪ್ರಕಾಶ ಬನ್ನಿಕೋಡ, ರಮೇಶ ಮಡಿವಾಳರ, ಡಾ.ನಿಂಗಪ್ಪ ಚಳಗೇರಿ, ವಿಜಯ ಅಂಗಡಿ, ನಿಂಗಪ್ಪ ಕಡೂರ, ಮಂಜುನಾಥ ಮಾಸೂರು ಇತರರು ಇದ್ದರು.