

ಉಪ್ಪಿನಂಗಡಿ: ಪಂಚಾಯಿತಿ ಪ್ರತಿನಿಧಿ ವಿದೇಶ ವಾಸ್ತವ್ಯದ ಕಾರಣಕ್ಕೆ ಪೆರ್ನೆ ಗ್ರಾಪಂನಲ್ಲಿ ತೆರವಾದ ಒಂದು ಸ್ಥಾನಕ್ಕಾಗಿ ಶನಿವಾರ ನಡೆದ ಉಪಚುನಾವಣೆಯಲ್ಲಿ ಶೇ 69.12 ಮತದಾನವಾಗಿದ್ದರೆ, ಇಳಂತಿಲ ಗ್ರಾಮ ಪಂಚಾಯಿತಿನ ಚುನಾಯಿತ ಪ್ರತಿನಿಧಿಯ ಮರಣದ ಕಾರಣಕ್ಕೆ ತೆರವಾದ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಶೇ. 61.14 ಮತದಾನವಾಗಿರುವ ಬಗ್ಗೆ ವರದಿಯಾಗಿದೆ.
ಪೆರ್ನೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಳಿನಿ ರೋಹಿತಾಕ್ಷ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರತಿಮಾ ರಾಜೀವ ಬಂಡಸಾಲೆ ಸ್ಪರ್ಧಿಸಿದ್ದರು. ಒಟ್ಟು 1315 ಮತಗಳ ಪೈಕಿ 909 ಮತಗಳು ಚಲಾಯಿಸಲ್ಪಟ್ಟಿದೆ.
ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಐರಿನ್ ಮಸ್ಕರೇನ್ಹಸ್ ವಿದೇಶಕ್ಕೆ ತೆರಳಿದ್ದರಿಂದ ತೆರವಾದ ಅವರ ಸ್ಥಾನಕ್ಕೆ ಈ ಉಪಚುನಾವಣೆ ನಡೆಯಿತು.
ಇಳಂತಿಲದ ಒಂದನೇ ವಾರ್ಡ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ರೇಖಾ ಎಂಬುವರ ಮರಣದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು, 1279 ಮತಗಳ ಪೈಕಿ 782 ಮತ ಚಲಾಯಿಸಲ್ಪಟ್ಟಿದೆ. ಇಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು , ಬಿಜೆಪಿ ಬೆಂಬಲಿತರಾಗಿ ಮೀನಾಕ್ಷಿ ಈಶ್ವರ ಶೆಟ್ಟಿ ಮುರ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಬೆಂಬಲಿತರಾಗಿ ಕುಸುಮಾ ಈಶ್ವರ ಗೌಡ ಬಾರಿಕೆ ಸ್ಪರ್ಧಿಸಿದ್ದಾರೆ.