68ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

carona logo
Published on

ಕಾರವಾರ/ಯಲ್ಲಾಪುರ: ಜಿಲ್ಲೆಯ ಇನ್ನಿಬ್ಬರಿಗೆ ಕರೊನಾ ಇರುವುದು ಭಾನುವಾರ ಖಚಿತವಾಗಿದೆ.

ಮುಂಬೈನಿಂದ ಮೇ 16ರಂದು ಬೈಕ್​ನಲ್ಲಿ ಹೊರಟು, 17ಕ್ಕೆ ಯಲ್ಲಾಪುರ ತಲುಪಿದ 20 ವರ್ಷದ ಗೃಹಿಣಿ (ಪಿ-2021) ಹಾಗೂ ಆಕೆಯ 24 ವರ್ಷದ ಪತಿ (ಪಿ-2022)ರಲ್ಲಿ ರೋಗ ಇರುವುದು ಖಚಿತವಾಗಿದೆ. ಇಬ್ಬರೂ ನೇರವಾಗಿ ಕ್ವಾರಂಟೈನ್ ಕೇಂದ್ರ ತಲುಪಿದ್ದರಿಂದ ಬೇರೆ ಯಾರ ಸಂಪರ್ಕಕ್ಕೂ ಬಂದಿಲ್ಲ ಎಂದು ಶಿರಸಿ ಎಸಿ ಈಶ್ವರ ಉಳ್ಳಾಗಡ್ಡಿ ಸ್ಪಷ್ಟಪಡಿಸಿದ್ದಾರೆ.

ಸದ್ಯ ಜಿಲ್ಲೆಯ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ ಭಾನುವಾರ 68ಕ್ಕೆ ತಲುಪಿದೆ. ಜೊಯಿಡಾ, ಕುಮಟಾ, ದಾಂಡೇಲಿಯ ತಲಾ ಒಬ್ಬರು, ಕಾರವಾರದ ಇಬ್ಬರು, ಮುಂಡಗೋಡಿನ ಮೂವರು, ಯಲ್ಲಾಪುರದ ನಾಲ್ಕು, ಹೊನ್ನಾವರ ಹಾಗೂ ಶಿರಸಿಯ ತಲಾ ಏಳು, ಭಟ್ಕಳದ 42 ಜನರಿಗೆ ಕೋವಿಡ್-19 ಇರುವುದು ಖಚಿತವಾಗಿದೆ. ಆದರೆ, ಕಾರವಾರದ ಒಬ್ಬ ರೋಗಿ ಬಿಟ್ಟು ಉಳಿದ ಎಲ್ಲರಿಗೂ ಕಾರವಾರ ಕ್ರಿಮ್್ಸ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ತಪ್ಪಿದ್ದವರ ಮಾಹಿತಿ ನೀಡಿ: ಜಿಲ್ಲೆಯಲ್ಲಿ ಮೇ 15ರ ನಂತರ ರೋಗ ಖಚಿತವಾದ ಎಲ್ಲರೂ ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ಹೆಚ್ಚಿನವರನ್ನು ಆಗ ಚೆಕ್​ಪೋಸ್ಟ್​ಗಳಲ್ಲಿ ತಡೆದು ತಪಾಸಣೆ ನಡೆಸಿ, ಕ್ವಾರಂಟೈನ್ ಮಾಡಲಾಗಿದೆ. ಅವರನ್ನು ಹೊರತುಪಡಿಸಿಯೂ ಕೆಲವರು ಬೇರೆ ರಾಜ್ಯಗಳಿಂದ ಬಂದಿದ್ದರೂ ಸಂಬಂಧಪಟ್ಟವರಿಗೆ ಮಾಹಿತಿ ನೀಡದೇ ತಮ್ಮ ಪಾಡಿಗೆ ಮನೆಗೆ ಹೋಗಿ ಉಳಿದವರು ಇದ್ದರೆ ಅಕ್ಕಪಕ್ಕದ ಜನ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ವಿನಂತಿಸಿದ್ದಾರೆ.

ಕ್ವಾರಂಟೈನ್ ನಿಯಮ ಬದಲಾವಣೆ: ಹೊರ ರಾಜ್ಯದಿಂದ ಬರುವವರಿಗಾಗಿ ಕ್ವಾರಂಟೈನ್ ನಿಯಮ ಬದಲಾವಣೆ ಮಾಡಲಾಗಿದೆ ಎಂದು ಎಸ್​ಪಿ ಶಿವ ಪ್ರಕಾಶ ದೇವರಾಜು ತಿಳಿಸಿದ್ದಾರೆ. ಎಲ್ಲರಿಗೂ ಸೇವಾ ಸಿಂಧುವಲ್ಲಿ ಪಾಸ್ ಪಡೆಯುವುದು ಕಡ್ಡಾಯ. ಹೈ ರಿಸ್ಕ್ ಎಂದು ಗುರುತಿಸಿರುವ ರಾಜ್ಯದಿಂದ ಬಂದವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ. ಐದು ಅಥವಾ ಏಳನೇ ದಿನ ಗಂಟಲ ದ್ರವದ ಮಾದರಿಯ ವರದಿ ನೆಗೆಟಿವ್ ಬಂದರೆ ತೆರಳಬಹುದಾಗಿದೆ. ಉಳಿದ ರಾಜ್ಯದಿಂದ ಬಂದವರು 14 ದಿನ ಹೋಂ ಕ್ವಾರಂಟೈನ್ ಮಾಡಬೇಕಾಗಿದೆ. ಹತ್ತಿರದ ಸಂಬಂಧಿಕರ ಮೃತರಾದಲ್ಲಿ, ತೀವ್ರ ಅನಾರೋಗ್ಯ, ವಿದ್ಯಾರ್ಥಿಗಳು ಊರಿಗೆ ಮರಳಲು, ವಿದೇಶದಿಂದ ವಿಮಾನ, ಹಡಗಿನಲ್ಲಿ ಬಂದು ಇಳಿದವರಿಗೆ ಪಾಸ್ ಇಲ್ಲದೆ ಪ್ರವೇಶಕ್ಕೆ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಿಂದ ತೆರಳಿದ 3 ಸಾವಿರ ಕಾರ್ವಿುಕರು: ಜಿಲ್ಲೆಯಿಂದ ಇದುವರೆಗೆ 3 ಸಾವಿರ ಕಾರ್ವಿುಕರು ಉತ್ತರ ಭಾರತದ ರಾಜ್ಯಗಳಿಗೆ ತೆರಳಿದ್ದಾರೆ. ರಾಜಸ್ಥಾನದ 257, ಬಿಹಾರದ 902, ಜಾರ್ಖಂಡದ 627, ಉತ್ತರ ಪ್ರದೇಶದ 1024, ಮಧ್ಯ ಪ್ರದೇಶದ 151, ಹರಿಯಾಣದ 16 ಸೇರಿ 2977 ಜನರು ರೈಲಿನ ಮೂಲಕ ತೆರಳಿದ್ದು, ಪಶ್ಚಿಮ ಬಂಗಾಳದ 90, ಛತ್ತೀಸ್​ಗಢದ 14, ಗುಜರಾತ್​ನ 14 ಕಾರ್ವಿುಕರನ್ನು ಬಸ್ ಮೂಲಕ ಕಳಿಸಲಾಗಿದೆ ಎಂದು ನೋಡಲ್ ಅಧಿಕಾರಿ ಪುರುಷೋತ್ತಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net