68 ಕಡೆ ಬ್ಲಾಕ್ ಗುರುತು : ಬೆಳ್ತಂಗಡಿಯಲ್ಲಿ 81 ಗ್ರಾಮಗಳಲ್ಲಿ ಪ್ರಕ್ರಿಯೆ : ಪ್ರತಿಭಟನೆ ಬೆನ್ನಲ್ಲೇ ಕ್ರಮ

New Project (21)
Published on

ಮನೋಹರ್ ಬಳಂಜ ಬೆಳ್ತಂಗಡಿ

ಸರ್ಕಾರ ಈಗಾಗಲೆ 9/11, ಅಕ್ರಮ ಸಕ್ರಮದ ಅವೈಜ್ಞಾನಿಕ ಕ್ರಮದಿಂದ ಮನೆ, ಕಟ್ಟಡ ನಿರ್ಮಾಣ ಕಾಮಗಾರಿ ಕ್ಲಿಷ್ಟಕರವಾಗಿರುವ ನಡುವೆಯೇ ಮರಳು, ಕೆಂಪುಕಲ್ಲು ಸಿಗದೆ ಅರ್ಧಕ್ಕೇ ಕಾಮಗಾರಿ ನಿಂತು ಸಾವಿರಾರು ಕಾರ್ಮಿಕರ ಬದುಕು ಅತಂತ್ರವಾಗಿದೆ. ಎಲ್ಲೆಡೆ ಹೋರಾಟ, ಪ್ರತಿಭಟನೆ ತೀವ್ರವಾಗುತ್ತಲೇ ಕಳೆದ ವಾರ ಮರಳು ನೀತಿ ಸಮಿತಿ ಅಧ್ಯಕ್ಷರು, ದ.ಕ. ಜಿಲ್ಲೆಯ ಸಹಾಯಕ ಆಯುಕ್ತರ ಸೂಚನೆಯಂತೆ ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಿಗೆ ಸಂಬಂಧಿಸಿದಂತೆ ಒಟ್ಟು 68 ಕಡೆಗಳಲ್ಲಿ ಮರಳು ತೆಗೆಯಬಲ್ಲ ಬ್ಲಾಕ್‌ಗಳನ್ನು ಗುರುತಿಸಿ ವರದಿ ಸಲ್ಲಿಸಲಾಗಿದೆ

ಮೂರು ಶ್ರೇಣಿಗಳಾಗಿ ಗುರುತಿಸುವಿಕೆ: ಸಹಾಯಕ ಆಯುಕ್ತರ ಇತ್ತೀಚೆಗೆ ಜಿಲ್ಲೆಯ ಎಲ್ಲ ತಾಲೂಕಿನ ತಹಸೀಲ್ದಾರ್, ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಾದೇಶಿಕ ನಿರ್ದೇಶಕರೊಂದಿಗೆ ಸಭೆ ಕರೆದು ಆಯಾ ತಾಲೂಕಿನ ಗ್ರಾಮವಾರು ಮೊದಲನೇ ಶ್ರೇಣಿ(ತೊರೆ), ಎರಡನೇ ಶ್ರೇಣಿ(ಹಳ್ಳ), ಮೂರನೇ ಶ್ರೇಣಿ(ಹೊಳೆ)ಯಲ್ಲಿ ಹೊಸದಾಗಿ ಮರಳು ತೆಗೆಯಬಹುದಾದ ಬ್ಲಾಕ್ ಗುರುತಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಿದ್ದರು.

28 ಗ್ರಾ.ಪಂ.ಗಳಲ್ಲಿ ಲಭ್ಯ: ಬೆಳ್ತಂಗಡಿ ತಾಲೂಕಿನ ತಾ.ಪಂ. ಇಒ ಭವಾನಿಶಂಕರ್ ಹಾಗೂ ತಹಸೀಲ್ದಾರ್ ಪಥ್ವಿ ಸಾನಿಕಮ್ ಅವರ ಸೂಚನೆಯಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮೇಲ್ನೋಟಕ್ಕೆ ಸೂಕ್ತ ಎಂದು ಕಂಡಂತೆ 48 ಗ್ರಾ.ಪಂ. ಪೈಕಿ 28 ಗ್ರಾ.ಪಂ. ವ್ಯಾಪ್ತಿಗಳಲ್ಲಿ ಮರಳು ದಿಬ್ಬ ಇರುವ ಪ್ರದೇಶವನ್ನು ಗುರುತಿಸಿ ವರದಿ ನೀಡಿದ್ದಾರೆ. ಅವುಗಳನ್ನು ಕ್ರೋಡೀಕರಿಸಿ ತಾ.ಪಂ. ಇಒ ಅವರು ಎಸಿ, ತಹಸೀಲ್ದಾರ್, ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಾದೇಶಿಕ ನಿರ್ದೇಶಕ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೂಡಲೆ ಪ್ರಸ್ತಾವನೆ ಜಾರಿಗೆ ಬಂದಲ್ಲಿ ತಾಲೂಕಿನ ಮನೆ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಗಾಧ ಪ್ರಮಾಣದ ಮರಳಿನ ಕೊರತೆ ನೀಗಿಸಲು ಸಾಧ್ಯವಾಗಲಿದೆ.

ಗುರುತಿಸಿದ ಸ್ಥಳಗಳು: ಬರೆಂಗಾಡಿ ಕಿಲಾರ, ಕೂಡಿಗೆ ಅಂಡಿಂಜೆ, ಉಚ್ಚಿಕಟ್ಟ, ಪುತ್ತಿಲ- ಪಾಪುದಡ್ಕ, ಕುಂಟಾಲಪಲ್ಕೆಬೊಳ್ಜೆ, ಸುರುಳಿ, ಮಾಯ, ಕೊಲ್ಪಾಡಿ, ಕುಕ್ಕೋಟ್ಟು, ಕಿನ್ಯಾಜೆ, ಮರ್ವದಡಿ, ಗಿಳಿಕಾಪು, ಗಿಂಡಾಡಿ, ಕಾಫಿನಡ್ಕ, ಸುದೆಗಂಡಿ, ಹೊಸಮಠ, ಪರ್ಲಾಣಿ, ಕೊಳಂಬೆ, ಅರಣೆಪಾದೆ, ಅಜಿಕುರಿ ದೊಂಡೋಲೆ, ಮುಳಿಕ್ಕಾರು, ಪಂಜಿಗುಡ್ಡೆ, ಸುಧೆಕಾರು ಬಳಿ, ಮಟ್ಟು, ಕೊಡಮಣಿ, ಮಾಯಿಲ, ಬೆಳ್ಳೂರು ಕಂಬಳದಡ್ಡು, ಕೊಪ್ಪದಗಂಡಿ, ಉದ್ದಾರ ಮಠ, ಬೆಳ್ಳೂರು ಬಲು, ಪಜಿರಡ್ಕ, ನಿಡಿಗಲ್, ಬರಾಯದರ್ಖಾಸು, ಎರಕಡಪು, ವಂಜಾರೆ, ಕಜೆ ಪರಡಾಲು, ಕೊಪ್ಪದಬಲು ಸುಧೆಮುಗೇರು, ಬರ್ಕಜೆ, ಉಮಿಲಾಯ, ಬಜಕ್ರೆಸಾಲು, ಪುತ್ರಬಲು, ಎರುಕಡಪು, ಗುರಿಂಗಾನ, ಬೆರ್ಕೆ ಹೊಳೆಬದಿ, ಪಡ್ಲಾಡಿ, ಕುಂಡಡ್ಕ, ಓಡದ ಕರಿಯ, ಪರಾರಿ ಅಗರಿಮಾರು, ಕಂಬಳದಡ್ಡ, ಕೊಲ್ಲಿ ದೇವರಗುಂಡಿ, ದಿಡುಪೆ, ಕುಕ್ಕಾವು, ಅತ್ಯಾರಬೆಟ್ಟು, ಮೃತ್ಯುಂಜಯ ನದಿ, ಬಲ್ಯಾರ್ ಕಾಪು, ನಿಡಿಗಲ್, ಬಸ್ರಾಯ, ನೆಕ್ಕರೆ, ಅಣಿಯೂಯ ಪರ್ಪಳ, ಕಪಿಲ ಪಟ್ರಮೆ, ಕಲ್ಲಾಜೆ, ಶಾಂತ್ಯಾಯ, ಪೆಲತ್ತೇರಿ, ಶಿರ್ಲಾಲು ಗ್ರಾಮದ ಭೈರವಗುಂಡಿ, ಸಿರಿಮಂಗಳ ಹತ್ತಿರ, ಕುದ್ಯಾಡಿ ಕೋಲ್ಯಾಯ ಬಳಿ, ಸುಲ್ಕೇರಿ ಹಟ್ರಿಂಜೆ ಬಳಿ, ಕೂಟೇಲು ಬಳಿ, ವೇಣೂರು ಮಸೀದಿ ಬಳಿ.

ರಸ್ತೆಗೆ ಚರಳ್ ಹಾಕಲು ಅವಕಾಶ ಕೋರಿ ಪತ್ರ

ಬೆಳ್ತಂಗಡಿ ತಾಲೂಕಿನಲ್ಲಿ ಮಳೆಗೆ ಅನೇಕ ರಸ್ತೆಗಳು ಬಹಳಷ್ಟು ಹಾಳಾಗಿವೆ. ಆದರೆ ರಸ್ತೆ ಸರಿಪಡಿಸಲು ಚರಳ್ ಮುಟ್ಟಲೂ ಅವಕಾಶವಿಲ್ಲ. ಪ್ರಸಕ್ತ ತಾಲೂಕಿನ 81 ಗ್ರಾಮಗಳಿಗೆ ಸಂಬಂಧಿಸಿದಂತೆ 2,400 ಕಿ.ಮೀ. ಕಚ್ಚಾ ರಸ್ತೆಯಿದೆ. ಆ ರಸ್ತೆಗಳ ತುರ್ತು ದುರಸ್ತಿಗೆ ಚರಳಿನ ಬೇಡಿಕೆ ಪಟ್ಟಿಯನ್ನು ಸಲ್ಲಿಸುವಂತೆ ಸಹಾಯಕ ಆಯುಕ್ತರು ಸೂಚಿಸಿದ್ದಾರೆ. ಅದರಂತೆ ಎಲ್ಲ ಗ್ರಾಮಗಳ ಎಷ್ಟು ಕಿ.ಮೀ. ರಸ್ತೆಗೆ ಚರಳ್ ಅವಶ್ಯವಿದೆ ಹಾಗೂ ಎಷ್ಟು ಪ್ರಮಾಣ ಅವಶ್ಯವಿದೆ ಎಂಬುದನ್ನು ಪಟ್ಟಿ ಮಾಡಿ ನೀಡಲಾಗಿದೆ.

ಮರಳು ಹಾಗೂ ಕಲ್ಲಿನ ಕೃತಕ ಅಭಾವದಿಂದ ತಾಲೂಕಿನಲ್ಲಿ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು, ಸಹಾಯಕ ದಿನಗೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಈ ಕುರಿತು ಗ್ರಾಮ ಗ್ರಾಮಗಳಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜನರು ಈ ಕುರಿತು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತಕ್ಷಣ ಸಭೆ ಕರೆದು ಈಗಾಗಲೇ ಗುರುತಿಸಿರುವ ಸ್ಥಳಗಳಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸಬೇಕು. ಹರೀಶ್ ಪೂಂಜ, ಶಾಸಕ ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ, ಫಲ್ಗುಣಿ, ಸೋಮಾವತಿ, ಮೃತ್ಯುಂಜಯ, ನೆರಿಯಾ ನದಿ, ಕಪಿಲಾ, ಕುಂಡಡ್ಕ, ಶಿವ ನದಿ, ಅಣಿಯೂರು ಹೊಳೆ, ನೆರಿಯಾ ಹೊಳೆಗಳಲ್ಲಿ ಮೊದಲನೇ, ಎರಡನೇ, ಮೂರನೇ ಶ್ರೇಣಿ ಎಂಬಂತೆ ಒಟ್ಟು 28 ಗ್ರಾಮಗಳ 68 ಕಡೆಗಳಲ್ಲಿ ಮರಳು ನಿಕ್ಷೇಪ ಇರುವುದನ್ನು ಗುರುತಿಸಲಾಗಿದೆ. ಲೋಕೋಪಯೋಗಿ, ಅರಣ್ಯ ಇಲಾಖೆ, ಗಣಿ ಇಲಾಖೆ ಜಂಟಿ ಸರ್ವೇ ಬಳಿಕ ನಿಕ್ಷೇಪ ಅಂತಿಮವಾಗಲಿದೆ. ಭವಾನಿ ಶಂಕರ್ ತಾ.ಪಂ. ಕಾರ್ಯನಿರ್ವಹಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net