

ಮರಿದೇವ ಹೂಗಾರ ಹುಬ್ಬಳ್ಳಿ
ಸಾರಿಗೆ ನೌಕರರ ಮುಷ್ಕರದ ಹಿನ್ನೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 66 ಕೋಟಿ ರೂ. ಆದಾಯ ಖೋತಾ ಆಗಿದೆ. 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ಏ. 7ರಿಂದ ಮುಷ್ಕರ ನಡೆಸಿದ್ದಾರೆ. ಏ. 17ರವರೆಗೆ ಬಹುತೇಕ ಪ್ರಮಾಣದಲ್ಲಿ ಬಸ್ಗಳ ಸಂಚಾರ ಸಾಗಲಿಲ್ಲ. ಏ. 18ರಿಂದ ನೌಕರರ ಪೈಕಿ ಬಹುತೇಕರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿದ್ದಾರೆ. ಹೀಗಾಗಿ, ಬಸ್ ಸಂಚಾರ ಸಹಜ ಸ್ಥಿತಿಗೆ ಮರಳತೊಡಗಿದೆ.
ಏ. 7ರಿಂದ ಮುಷ್ಕರ ನಡೆಸಿದ್ದರಿಂದ ಇದುವರೆಗೆ ಸಂಸ್ಥೆಗೆ 66 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸಂಸ್ಥೆಯಲ್ಲಿ ಒಟ್ಟು 4883 ಬಸ್ಗಳಿವೆ. ಎಲ್ಲ ಬಸ್ಗಳು ಸಹಜವಾಗಿ ಸಂಚರಿಸಿದರೆ, ಒಂದು ದಿನಕ್ಕೆ ಸರಾಸರಿ 4 ಕೋಟಿ 20 ಲಕ್ಷ ರೂ. ಆದಾಯ ಬರುತ್ತದೆ. ಏ. 18ರಿಂದ ಸಾಕಷ್ಟು ಸಂಖ್ಯೆಯಲ್ಲಿ ಬಸ್ ಸಂಚಾರ ದೊಡ್ಡ ಪ್ರಮಾಣದಲ್ಲಿ ಮರು ಆರಂಭವಾಗಿದೆ. ಏ. 18ರಂದು 1306 (ಶೇ. 38.63), 19ರಂದು 982 (ಶೇ. 29.04), 20ರಂದು 1539 (ಶೇ. 45.52), 21ರಂದು 2830 (ಶೇ. 87.04) ಬಸ್ಗಳು ಸಂಚಾರ ಶುರು ಮಾಡಿವೆ.
ಸ್ವಯಂಪ್ರೇರಣೆ: ಸಾರಿಗೆ ಸಂಸ್ಥೆ ನೌಕರರು ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯಗೊಂಡಿದ್ದು, ಎಂದಿನಂತೆ ಬಸ್ಗಳ ಸಂಚಾರ ಆರಂಭವಾಗಿದೆ. ಈ ಹಿಂದೆ ಸಾರಿಗೆ ಸಿಬ್ಬಂದಿ ವಜಾ, ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಇದಕ್ಕೂ ಕೆಲವರು ಹೆದರಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಕೋವಿಡ್ ಭೀತಿ: ಸಾರಿಗೆ ಮುಷ್ಕರ ಅಂತ್ಯ ಕಂಡಿತು ಎನ್ನುವಾಗಲೆ, ಈಗ ಕೋವಿಡ್ ಭೀತಿ ಶುರುವಾಗಿದೆ. ಏ. 21ರಿಂದ ಮೇ 4ರವರೆಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಫ್ಯೂ ಜಾರಿಯಾಗಿದೆ. ರಾಜ್ಯದ ಒಳಗೆ ಹಾಗೂ ಅಂತರ ರಾಜ್ಯಗಳಲ್ಲಿ ಸಂಚರಿಸುವ ಬಸ್ಗಳಲ್ಲಿ ಗರಿಷ್ಠ ಶೇ. 50ರಷ್ಟು ಆಸನಗಳಲ್ಲಿ ಮಾತ್ರ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ತಮಿಳುನಾಡು ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ನೀಡಿದ ಮಾರ್ಗಸೂಚಿಗಳನ್ವಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.