ಸುಳ್ಳ ರಸ್ತೆಯಲ್ಲಿ 66 ಎಕರೆ ಲೇಔಟ್

h3- Huda 1
Published on

ಹುಬ್ಬಳ್ಳಿ: ನಗರದ ಸುಳ್ಳ ರಸ್ತೆ ಗೋಪನಕೊಪ್ಪ ಗ್ರಾಮದಲ್ಲಿರುವ ಸುಮಾರು 66.26 ಎಕರೆ ಜಾಗವನ್ನು ವಸತಿ ಯೋಜನೆಗಾಗಿ ಖರೀದಿಸಿ ಸರ್ಕಾರದ ಮಂಜೂರಾತಿಗೆ ಕಳಿಸಲು ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ತೀರ್ವನಿಸಿದೆ.

ಇಲ್ಲಿಯ ನವನಗರದಲ್ಲಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಈ ವಸತಿ ಯೋಜನೆ ಕೈಗೊಳ್ಳಲು ಸರ್ಕಾರದ ಆದೇಶ ಬಂದ ಕೂಡಲೆ, 1500 ನಿವೇಶನಗಳ ಲೇಔಟ್ ನಿರ್ವಿುಸಿ ಅರ್ಹರಿಗೆ ಹಂಚಲಾಗುವುದು. ಧಾರವಾಡದ ತಡಸಿನಕೊಪ್ಪ ಮತ್ತು ಲಕಮನಹಳ್ಳಿಯಲ್ಲಿ ಈ ಹಿಂದೆ ಅರ್ಜಿ ಕರೆಯಲಾಗಿರುವ 337 ನಿವೇಶನಗಳನ್ನು ಶೀಘ್ರ ಹಂಚಿಕೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ರಾಯನಾಳ ಸರಹದ್ದಿನ ರಾಮಮನೋಹರ ಲೋಹಿಯಾನಗರ ಹಾಗೂ ಧಾರವಾಡದ ಸತ್ತೂರಿನಲ್ಲಿರುವ 100 ಮೂಲೆ ನಿವೇಶನಗಳನ್ನು ಹರಾಜು ಮಾಡುವ ಬಗ್ಗೆ ರ್ಚಚಿಸಲಾಯಿತು.

ನಾಗರಿಕ ಸೌಲಭ್ಯ (ಸಿಎ) ನಿವೇಶನದ ಸರ್ವೆ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಶೀಘ್ರವಾಗಿ ಸಿಎ ನಿವೇಶನಕ್ಕಾಗಿ ಅರ್ಜಿ ಕರೆಯಲಾಗುವುದು ಎಂದು ಅಧ್ಯಕ್ಷ ಕಲಬುರ್ಗಿ ಸಭೆಗೆ ತಿಳಿಸಿದರು.

ಅನಧಿಕೃತ ಲೇಔಟ್​ಗಳನ್ನು ಈ ಹಿಂದೆ ತೆರವು ಮಾಡಲಾಗಿದೆ. ಇನ್ನು ಮುಂದೆಯೂ ಅಂತಹ ಲೇಔಟ್​ಗಳು ತಲೆ ಎತ್ತದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಎಲ್ಲಿಯಾದರೂ ಅನಧಿಕೃತ ಲೇಔಟ್ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಬೇಕೆಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ವಾರದಿಂದ ಅನಧಿಕೃತ ಲೇಔಟ್ ವಿರುದ್ಧ ಕಾರ್ಯುಚರಣೆ ಮುಂದುವರಿಯಲಿದೆ ಎಂದೂ ಅವರು ತಿಳಿಸಿದರು.

ಶಾಸಕರಾದ ಅಮೃತ ದೇಸಾಯಿ, ಎಸ್.ವಿ. ಸಂಕನೂರ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಹುಡಾ ಸದಸ್ಯರಾದ ಯಲ್ಲಪ್ಪ ಅರವಳದ, ಚಂದ್ರಶೇಖರ ಗೋಕಾಕ, ಸುನೀಲ ಮೋರೆ, ಮೀನಾಕ್ಷಿ ವಂಟಮುರಿ, ಆಯುಕ್ತ ಎನ್.ಎಚ್. ಕುಮ್ಮಣ್ಣನವರ, ನಗರ ಯೋಜಕ ಸದಸ್ಯ ವಿವೇಕ ಕಾರೇಕರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net