ಯೋಗದಿಂದ 2027ಕ್ಕೆ 66.2 ಬಿಲಿಯನ್ ಡಾಲರ್ ಆರ್ಥಿಕ ವಹಿವಾಟು ನಿರೀಕ್ಷೆ

yoga
Published on

ಮೈಸೂರು: ಯೋಗ ಜಗತ್ತಿನ ಪ್ರತಿಯೊಬ್ಬರ ಆರೋಗ್ಯ ಕಾಪಾಡಲು ಮಹತ್ವದ ಕೊಡುಗೆ ನೀಡುವುದು ಮಾತ್ರವಲ್ಲದೆ ಜಗತ್ತಿನ ಆರ್ಥಿಕ ಬೆಳವ ಣಿಗೆಯಲ್ಲಿ ಬಹುದೊಡ್ಡ ಕೊಡುಗೆ ನೀಡಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಕುಮಾರ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಮತ್ತು ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆ ವತಿಯಿಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯೋಗ ಒಲಂಪಿಯಾಡ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಯೋಗ ಜನಪ್ರೀಯತೆಗೊಳ್ಳುತ್ತಿದ್ದು, 2027ರ ವೇಳೆಗೆ ವಿಶ್ವದಲ್ಲಿ ಯೋಗದ ಮೂಲಕ 66.2 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ವಹಿವಾಟು ನಡೆಯುವ ನಿರೀಕ್ಷೆ ಇದೆ. ಈ ಆರ್ಥಿಕ ವಹಿವಾಟು ಪ್ರತಿ ವರ್ಷ ಶೇ.10 ರಷ್ಟು ಏರಿಕೆ ಕಾಣಲಿದೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ. ಹಲವಾರು ಜನರಿಗೆ ಉತ್ತಮ ಬದುಕು ಕಟ್ಟಿಕೊಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ಜಗತ್ತಿಗೆ ಯೋಗದ ಅವಶ್ಯಕತೆ ಇದೆ ಎಂದು ಮನಗೊಂಡ ಭಾರತ ಯೋಗ ದಿನಾಚರಣೆ ಮೂಲಕ ಯೋಗವನ್ನು ಜಗತ್ತಿಗೆ ಪರಿಚಯಿಸಿ ಜಗತ್ತಿಗೆ ಉತ್ತಮ ಜೀವನ ಪದ್ಧತಿ ನೀಡಿದೆ. ಪ್ರತಿಯೊಬ್ಬರ ಸ್ವಾಸ್ಥೃ ಹಾಗೂ ವಿಶ್ವದ ಸ್ವಾಸ್ಥೃಕ್ಕೆ ಯೋಗದ ಅವಶ್ಯಕತೆ ಇದೆ. ಆರೋಗ್ಯಕರ ಮನಸ್ಸು ಇದ್ದರೆ ಮಾತ್ರ ಆರೋಗ್ಯಕರ ದೇಹ ಇರಲು ಸಾಧ್ಯ. ಯೋಗವು ಮನಸ್ಸು ಹಾಗೂ ದೇಹದ ಆರೋಗ್ಯ ಕಾಪಾಡಲು ಬಹುಮುಖ್ಯವಾದ ಕೊಡುಗೆ ನೀಡುತ್ತದೆ ಎಂದು ಹೇಳಿದರು.

ಎನ್‌ಸಿಇಆರ್‌ಟಿ ನಿರ್ದೇಶಕ ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ ಮಾತನಾಡಿ, ಯೋಗ ಕೇವಲ ಜನರ ಸ್ವಾಸ್ಥೃವನ್ನು ಮಾತ್ರ ಕಾಪಾಡು ವುದಿಲ್ಲ, ಸಮಾಜದ ಸ್ವಾಸ್ಥೃ ಕಾಪಾಡುವಲ್ಲೂ ಮಹತ್ವದ ಕೊಡುಗೆ ನೀಡುತ್ತಿದೆ. ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಯೋಗದಲ್ಲಿ ತೊಡಗುವವರು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದುತ್ತಾರೆ. ಪ್ರಸ್ತುತ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಮನುಕುಲ ಎದುರಿಸುತ್ತಿದೆ. ಪ್ರಕೃತಿಯನ್ನು ಅರ್ಥ ಮಾಡಿಕೊಂಡು ಪ್ರಕೃತಿಯೊಂದಿಗೆ ಬದುಕಲು ಕಲಿತರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ಕಾರ್ಯವನ್ನು ಯೋಗ ಯಶಸ್ವಿಯಾಗಿ ಮಾಡುತ್ತಿದೆ ಎಂದು ಹೇಳಿದರು.

ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು. ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದರೆ ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಯಾವುದೇ ವ್ಯಕ್ತಿ ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದ ನಂತರ ಅವರ ವ್ಯಕ್ತಿತ್ವದಲ್ಲೂ ಬದಲಾವಣೆ ಆಗುವುದನ್ನು ಕಾಣಬಹುದು ಎಂದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಶ್ರೀಕಾಂತ್ ಮಾತನಾಡಿ, ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಯೋಗ ಪಟುಗಳು ರಾಷ್ಟ್ರೀಯ ಯೋಗ ಒಲಂಪಿಯಾಡ್‌ನಲ್ಲಿ ಭಾಗವಹಿಸಿದ್ದರು. ಇದಲ್ಲದೆ ಜೆಎನ್‌ವಿ, ಕೆವಿಎಸ್, ವಿದ್ಯಾಭಾರತಿ ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳು ಭಾಗವಹಿಸಿದ್ದವು. ಒಟ್ಟು 240 ಬಾಲಕರು, 243 ಬಾಲಕಿಯರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net