

ಮೈಸೂರು: ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 6,505 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣ, ವಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿತ್ತು.
ಮೈಸೂರು ನಗರ ಮತ್ತು ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ 1,18,974 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಈ ಪೈಕಿ 58,688 ಸಿವಿಲ್ ಪ್ರಕರಣಗಳು ಹಾಗೂ 60,286 ಕ್ರಿಮಿನಲ್ ಪ್ರಕರಣಗಳಿವೆ. ಪ್ರಸ್ತುತ ಸದರಿ ಪ್ರಕರಣಗಳಲ್ಲಿ 19,363 ಪ್ರಕರಣಗಳನ್ನು ರಾಜಿಯಾಗಬಹುದಾದ ಪ್ರಕರಣಗಳಾಗಿವೆ.
ಅವುಗಳ ಪೈಕಿ 9,126 ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಯಿತು. ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ ಪ್ರಕರಣಗಳಲ್ಲಿ (ನ್ಯಾಯಾಲಯದಲ್ಲಿ ಬಾಕಿ ಇರುವ) 6,505 ಪ್ರಕರಣಗಳನ್ನು ಇತ್ಯರ್ಥಪಡಿಸಿ ವಿಲೇವಾರಿ ಮಾಡಲಾಯಿತು.
ಈ ಸಲ ಅದಾಲತ್‌ನಲ್ಲಿ ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ 31 ದಂಪತಿಗಳು ತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಒಂದಾಗಿದ್ದು, ಸತಿ-ಪತಿಗಳಾಗಿ ಹೊಸ ಜೀವನ ಶುರು ಮಾಡಿದ್ದಾರೆ.
6,505 ಪ್ರಕರಣಗಳು ತೀರ್ಮಾನವಾಗಿವೆ.
ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನ ಮೂಲಕ 36.36 ಕೋಟಿ ರೂ. ಇತ್ಯರ್ಥವಾಗಿರುತ್ತದೆ. ಈ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಪದಾಧಿಕಾರಿಗಳು, ಎಲ್ಲ ವಕೀಲರು ಹಾಗೂ ಕಕ್ಷಿದಾರರು, ಪೊಲೀಸ್ ಇಲಾಖೆಯನ್ನೊಳಗೊಂಡಂತೆ ಎಲ್ಲ ಇಲಾಖೆಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಕೃತಜ್ಞತೆ ಸಲ್ಲಿಸಿದರು.