65 ಕೋಟಿ ರೂ. ಬೆಳೆ ವಿಮೆ ಬಾಕಿ ವಿತರಿಸಿ: ಬ್ಯಾಡಗಿಯಲ್ಲಿ ರೈತರ ಪ್ರತಿಭಟನೆ

Farmer Protest in byadagi
Published on

ಬ್ಯಾಡಗಿ: ತಾಲೂಕಿನ ರೈತರಿಗೆ 2022-23ನೇ ಸಾಲಿನಲ್ಲಿ ತುಂಬಿದ ಬೆಳೆ ವಿಮೆ ಇನ್ನೂ ವಿತರಿಸಿಲ್ಲ, ವಿಮೆ ಮೊತ್ತದೊಂದಿಗೆ ಬಡ್ಡಿ ಸಮೇತ ಹಣ ವಿತರಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಬೇಕು ಎಂದು ತಾಲೂಕು ಹಸಿರು ಸೇನೆ ಹಾಗೂ ರೈತ ಸಂಘದ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹಿಂದಿನ ವರ್ಷದಲ್ಲಿ ಸಾವಿರಾರು ರೈತರು ಬೆಳೆ ವಿಮೆ ಕಂತು ತುಂಬಿದ್ದು, ಇನ್ನೂತನಕ ಪೂರ್ಣ ಪ್ರಮಾಣದಲ್ಲಿ ವಿಮೆ ಹಣ ನೀಡಿಲ್ಲ. ಮಧ್ಯಂತರ ಪರಿಹಾರವಾಗಿ ಶೇ. 25ರಷ್ಟು ವಿತರಿಸಿವೆ. ವಿಮೆ ಕಂಪನಿಯ ಲೆಕ್ಕದಂತೆ 65 ಕೋ.ರೂ. ಬಿಡುಗಡೆ ಬಾಕಿ ಉಳಿದಿದೆ. ಮುಂದಿನ ಹೋರಾಟದಲ್ಲಿ ರೈತ ವಿರೋಧಿ ಜನಪ್ರತಿನಿಧಿಗಳ ಭಾವಚಿತ್ರ ಹಿಡಿದು ಧರಣಿಗೆ ಕುಳಿತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಕೊಡಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯಂದ ಜಿಲ್ಲೆಯ ರೈತರಿಗೆ ಪದೇಪದೆ ಅನ್ಯಾಯವಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸುವ ಚಿಂತನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿ, ತಾಲೂಕಿನ ಆಣೂರು, ಬುಡಪನಹಳ್ಳಿ, ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗಳು ಜಾರಿಗೊಂಡಿದ್ದು, ಮೋಟಾರ್ ಚಾಲು ಮಾಡುವಲ್ಲಿ ಇಂಜಿನಿಯರ್ ಹಾಗೂ ತಾಂತ್ರಿಕ ವಿಭಾಗದವರು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಸಕಾಲದಲ್ಲಿ ಕೆರೆಗಳು ತುಂಬುತ್ತಿಲ್ಲ. ಎಲ್ಲ ಜಾಕ್​ವೆಲ್​ಗಳಲ್ಲಿ ನಾಲ್ಕು ಮೋಟರ್​ಗಳನ್ನು ಅಳವಡಿಸಲಾಗಿದೆ. ಆದರೆ, ಕೇವಲ 2 ಮೋಟಾರ್ ನೀರೆತ್ತುತ್ತಿದ್ದು, ಇನ್ನುಳಿದವು ಖಾಲಿ ಇವೆ. ನೀರು ಪೂರೈಕೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಿಕೊಂಡು ನಿಗದಿಪಡಿಸಿದ ಕೆರೆಗಳಿಗೆ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.

ಮೌನೇಶ ಕಮ್ಮಾರ, ನಿಂಗಪ್ಪ ಮಾಸಣಗಿ, ರುದ್ರನಗೌಡ್ರ ಕಾಡನಗೌಡ್ರ, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ಜಾನ್ ಪುನೀತ್, ಪ್ರಕಾಶ ಸಿದ್ಧಪ್ಪನವರ ಇತರಿದ್ದರು.

ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಕುರಿತು ಜಿಲ್ಲಾಧಿಕಾರಿ ಬಳಿ ರ್ಚಚಿಸಿದ್ದು, ಅಗತ್ಯ ದಾಖಲೆ ಸಲ್ಲಿಸಲಾಗಿದೆ. ರೈತರು ನೀರಾವರಿ ಪೈಪ್​ಲೈನ್ ಒಡೆಯುವುದು ಹಾಗೂ ಲಾಕ್​ಗಳನ್ನು ಒಡೆಯುವ ಪ್ರಕ್ರಿಯೆಯಲ್ಲಿ ತೊಡಗಿರುವುದು ತಿಳಿದುಬಂದಿದೆ. ಶೀಘ್ರದಲ್ಲೇ ಎಲ್ಲ ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್​ಗಳಿಗೆ ಎಚ್ಚರಿಕೆ ನೋಟಿಸ್ ಬಿಡುಗಡೆ ಮಾಡುತ್ತೇವೆ. ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. | ಫೀರೋಜ್​ಷಾ ಸೋಮನಕಟ್ಟೆ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net