

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನಿರಂತರವಾಗಿ ಅವೈಜ್ಞಾನಿಕ ಆದೇಶ ನೀಡುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಮಂಗಳವಾರ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿದ ಸ್ವಾಭಿಮಾನಿ ಒಕ್ಕಲಿಗರ ವೇದಿಕೆ, ಮಹಿಳಾ ಒಕ್ಕೂಟದ ಕಾರ್ಯಕರ್ತರು ಮತ್ತು ಜಿಲ್ಲಾ ರೈತ ಉತ್ಪಾದಕರ ಕಂಪನಿಗಳ ಒಕ್ಕೂಟ ಪದಾಧಿಕಾರಿಗಳ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ಉಳಿಸಿಕೊಳ್ಳಲು ರಾಜ್ಯಸರ್ಕಾರದ ಮುಂದಾಗಿಲ್ಲ. ಇನ್ನು ಸಂಕಷ್ಟದ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸದೆ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸುತ್ತೇವೆ. ಆಳುವ ಸರ್ಕಾರಗಳು ಕನ್ನಡ ನಾಡಿನ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಕಾರಸವಾಡಿ ಮಹದೇವು, ಶಿವರಾಮೇಗೌಡ, ಮಹದೇವಯ್ಯ, ಮಹೇಂದ್ರ ಗೆಜ್ಜಲಗೆರೆ, ಸಿದ್ದೇಗೌಡ ಬಸರಾಳು, ಹನುಮಂತೇಗೌಡ ನೇರಳಕೆರೆ, ಸ್ವಾಭಿಮಾನಿ ಒಕ್ಕಲಿಗರ ವೇದಿಕೆಯ ಕೆ ಸಿ ರವೀಂದ್ರ, ಎಲ್.ಕೃಷ್ಣ, ಕೃಷ್ಣಪ್ಪ, ಧನಂಜಯ, ಮಹಿಳಾ ಒಕ್ಕೂಟದ ಸುಶೀಲಮ್ಮ, ಕೋಮಲಾ, ಗಾಯತ್ರಿ, ಜ್ಯೋತಿ ನಾಗಣ್ಣ, ಪ್ರೇಮಾ, ನೀನಾ ಪಟೇಲ್ ಇತರರಿದ್ದರು.
64ನೇ ದಿನ ಪೂರೈಸಿದ ಧರಣಿ: ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯಸರ್ಕಾರದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ 64ನೇ ದಿನ ಪೂರೈಸಿತು.
ಧರಣಿಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಕೆ.ಬೋರಯ್ಯ, ಕನ್ನಡಸೇನೆ ಮಂಜುನಾಥ್, ಜಿ.ಬಿ.ಶಿವಕುಮಾರ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕೃಷ್ಣಪ್ರಕಾಶ್, ಮುದ್ದೇಗೌಡ, ನಾರಾಯಣ್, ಚಂದ್ರು ಇತರರಿದ್ದರು.