

ಕೋಲಾರ: ಕರೊನಾ ಲಾಕ್‌ಡೌನ್ ವೇಳೆ ನಷ್ಟಕ್ಕೀಡಾಗಿರುವ ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಸರ್ಕಾರ ಘೋಷಿಸಿರುವ ಪರಿಹಾರದಡಿ ಜಿಲ್ಲೆಯ ಒಟ್ಟು 20,563 ಫಲಾನುಭವಿಗಳ ಪೈಕಿ 13,284 ಫಲಾನುಭವಿಗಳಿಗೆ 6.44 ಕೋಟಿ ರೂ. ಜಮೆ ಆಗಿದೆ.
ಕರೊನಾ 2ನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ರೈತರು ಬೆಳೆದ ಹೂವು, ಹಣ್ಣು, ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಇಲ್ಲದೆ ಭಾರೀ ನಷ್ಟ ಅನುಭವಿಸಿದ್ದರು. ರೈತರ ನೆರವಿಗೆ ಬಂದ ಸರ್ಕಾರ 10ಕ್ಕೂ ಅಧಿಕ ಬಗೆಯ ಅಲ್ಪಾವಧಿ ಮತ್ತು ಬಹುವಾರ್ಷಿಕ ಬೆಳೆಯ ಹೂವು, ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ 13 ರೀತಿಯ ಹಣ್ಣು ಹಾಗೂ 23 ಬಗೆಯ ತರಕಾರಿ ಹಾಗೂ ಸೊಪ್ಪು ಬೆಳೆಗಾರರಿಗೆ ಹೆಕ್ಟೇರ್‌ಗೆ 10,000 ರೂ.ನಂತೆ ಗರಿಷ್ಠ 1 ಹೆಕ್ಟೇರ್‌ನ ಮಿತಿ ನಿಗದಿಸಿ ಪ್ಯಾಕೇಜ್ ಘೋಷಿಸಿತ್ತು.
ಜಿಲ್ಲೆಯ ಫಲಾನುಭವಿಗಳು: ಜಿಲ್ಲೆಯಲ್ಲಿ 6449 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ. ಬೆಳೆ ಸಮೀಕ್ಷೆ ನಡೆದು ಫ್ರೂಟ್ ಐಡಿ ಹೊಂದಿರುವ 14,951 ಹಾಗೂ ಫ್ರೂಟ್ ಐಡಿ ಹೊಂದಿರದ 5612 ರೈತರು ಸೇರಿ ಒಟ್ಟು 20563 ರೈತರು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ.
6.44 ಕೋಟಿ ರೂ. ಜಮೆ: ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿದ್ದು, ಈವರೆಗೆ ಒಟ್ಟು 13,284 ರೈತರಿಗೆ 6.44 ಕೋಟಿ ರೂ. ಪಾವತಿಸಲಾಗಿದೆ. 3065 ರೈತರಿಗೆ ಹಣ ಕೈ ಸೇರಬೇಕಿದೆ. ಫ್ರೂಟ್ ಐಡಿ ಹೊಂದಿರದ 5612 ರೈತರ ಪೈಕಿ 796 ರೈತರಿಂದ ದಾಖಲೆ ಪಡೆದು ಹಣ ಜಮೆ ಮಾಡಲಾಗಿದೆ. ಉಳಿದ 4816 ರೈತರು ಸೂಕ್ತ ದಾಖಲೆ ಒದಗಿಸದಿರುವುದರಿಂದ ಹಣ ಬಿಡುಗಡೆ ವಿಳಂಬವಾಗಿದೆ.
ಮಾವು ಬೆಳೆಗಿಲ್ಲ ಪರಿಹಾರ: ಪರಿಹಾರಕ್ಕೆ ಗುರುತಿಸಿರುವ ಪಟ್ಟಿಯಲ್ಲಿ ಮಾವು, ಸೀಬೆ ಹಾಗೂ ಬಾಳೆ ಸೇರಿತ್ತು. ಆದರೆ ಲಾಕ್‌ಡೌನ್ ವೇಳೆ ಈ ಬೆಳೆಗಳಿಗೆ ಸಮಸ್ಯೆಯಾಗಿಲ್ಲ ಎಂಬ ಕಾರಣಕ್ಕೆ ಸರ್ಕಾರ ನಷ್ಟ ಪರಿಹಾರಕ್ಕೆ ಪರಿಗಣಿಸಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಜಿಲ್ಲೆಯ ಮಟ್ಟಿಗೆ ಬಾಳೆ, ಸೀಬೆ ಬೆಳೆಯುವ ಪ್ರದೇಶ ತೀರಾ ಕಡಿಮೆ. ಆದರೆ ರಾಜ್ಯದಲ್ಲೇ ಅತಿ ಹೆಚ್ಚು 45,000 ಹೆಕ್ಟೇರ್ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯುವ ಜಿಲ್ಲೆ ಕೋಲಾರ. ಈ ವರ್ಷ ಕರೊನಾ ಕಾರಣದಿಂದ ಸೂಕ್ತ ಮಾರುಕಟ್ಟೆ ಸಿಗಲಿಲ್ಲ, ಬೆಲೆಯೂ ಕುಸಿದು ರೈತರು ಭಾರಿ ನಷ್ಟ ಅನುಭವಿಸಿ ಬೆಂಬಲ ಬೆಲೆಗೆ ಒತ್ತಾಯಿಸಿದ್ದರೂ ಸರ್ಕಾರ ನೆರವಿಗೆ ಬರಲಿಲ್ಲ. ಇತ್ತ ಪರಿಹಾರಧನ ನೀಡುವಲ್ಲೂ ಕೈ ಬಿಟ್ಟಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳೆ ನಷ್ಟ ಪರಿಹಾರದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜಂಟಿ ಖಾತೆ ಹೊಂದಿರುವ, ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನು ಇದ್ದು ಮರಣ ಹೊಂದಿದ್ದರೆ ಸೂಕ್ತ ದಾಖಲೆ ಸಲ್ಲಿಸದಿರುವ ಕಾರಣದಿಂದ ಪರಿಹಾರ ಧನ ಪಾವತಿ ಬಾಕಿ ಉಳಿದಿದೆ. ಎಂ. ಗಾಯತ್ರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ, ಕೋಲಾರ ಸರ್ಕಾರ ಬೆಳೆ ನಷ್ಟ ಪರಿಹಾರ ಘೋಷಿಸಿರುವ ಪಟ್ಟಿಯಲ್ಲಿ ಮಾವು ಸೇರಿದ್ದರೂ ಬೆಳೆಗಾರರಿಗೆ ನಷ್ಟ ಪರಿಹಾರ ನೀಡಿಲ್ಲ. ಕರೊನಾದಿಂದ ಮಾವಿಗೆ ಸೂಕ್ತ ಮಾರುಕಟ್ಟೆ, ಬೆಲೆ ಸಿಕ್ಕಿಲ್ಲ, ರೋಗ ಬಾಧೆಯಿಂದ ನಷ್ಟ ಅನುಭವಿಸಿರುವ ಸಂದರ್ಭದಲ್ಲಿ ಸರ್ಕಾರ ಮಾವು ಬೆಳೆಗಾರರನ್ನು ಪರಿಗಣಿಸದೆ ಅನ್ಯಾಯ ಮಾಡಿದೆ. ಟಿ.ವಿ.ರಮೇಶ್, ಮಾವು ಬೆಳೆಗಾರ, ಕೋಲಾರ