ಮುಳಬಾಗಿಲು: ನಗರಸಭೆಯ 2022-23ನೇ ಸಾಲಿನ ನಿರೀಕ್ಷಿತ ಆದಾಯ 64.91 ಕೋಟಿ ರೂ., ನಿರೀತ ಖರ್ಚು 64.48 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗಿದ್ದು, 42.30 ಲಕ್ಷ ರೂ. ಉಳಿತಾಯ ಬಜೆಟ್ ಎಂದು ಪೌರಾಯುಕ್ತ ವಿ.ಶ್ರೀಧರ್ ಬಜೆಟ್ ಮಂಡನೆ ಮಾಡಿದರು.
ನಗರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಬಜೆಟ್ ಆಯವ್ಯಯ ಸಭೆಯಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು, ಬಡಕುಟುಂಬದಲ್ಲಿ ಮಾರಣಾಂತಿಕ ಕಾಯಿಲೆಗೆ ತುತ್ತಾದವರಿಗೆ ವೈದ್ಯಕಿಯ ನೆರವು ಮತ್ತು ಈ ಸಮುದಾಯಗಳು ವಾಸಿಸುವ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳಿಗೆ 95 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳಿಗೆ 23 ಲಕ್ಷ ರೂ., ಅಂಗವಿಕಲ ವಿದ್ಯಾರ್ಥಿಗಳಿಗೆ 15 ಲಕ್ಷ ರೂ., ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿಮಾರ್ಣ, ಎಸ್ಸಿ, ಎಸ್ಟಿ ಹಾಗೂ ಇನ್ನಿತರ ಹಿಂದುಳಿದ ವರ್ಗಗಳ ಜನಾಂಗದವರಿಗೆ ವಸತಿಗಾಗಿ 45 ಲಕ್ಷ ರೂ. ಸಹಾಯಧನ, ಎಸ್ಸಿ ಎಸ್ಟಿ ಜನರು ವಾಸಿಸುವ ವಾರ್ಡ್ಗಳ ಅಭಿವೃದ್ಧಿಗಾಗಿ 5.67 ಕೋಟಿ ರೂ., ಎಸ್ಎಫ್ಸಿ, ಮುಕ್ತನಿಧಿ ಮತ್ತು ಇತರ ಅನುದಾನದಲ್ಲಿ ಎಲ್ಲ ವಾರ್ಡ್ಗಳ ಮೂಲಸೌಕರ್ಯಕ್ಕಾಗಿ 14.10ಲಕ್ಷ ರೂ., 1 ರಿಂದ 31ವಾರ್ಡ್ಗಳ ನಾಮಲಕ ಅಳವಡಿಸಲು 40 ಲಕ್ಷ ರೂ. ಮೀಸಲಿರಿಸಿದೆ.
ಸ್ವಾಗತ ಕಮಾನು, ರಸ್ತೆ ಬದಿಯಲ್ಲಿ ಗ್ರಿಲ್ ಅಳವಡಿಕೆಗೆ 70 ಲಕ್ಷ ರೂ., ಶ್ರೀರಾಮ ಮಂದಿರ ಅಭಿವೃದ್ಧಿಗೆ 60 ಲಕ್ಷ ರೂ., ನಗರಸಭೆ ಕಚೇರಿಯಲ್ಲಿ ಡೈನಿಂಗ್ ಹಾಲ್ ಕಾಮಗಾರಿಗೆ 20 ಲಕ್ಷ ರೂ., ಸಮುದಾಯ ಭವನಗಳ ಅಭಿವೃದ್ಧಿಗೆ 1.10 ಕೋಟಿ ರೂ., ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ 40 ಲಕ್ಷ ರೂ., ಸ್ವಾಗತ ಫಲಕ ಅಳವಡಿಸುವುದಕ್ಕೆ 40 ಲಕ್ಷ ರೂ., ಕಚೇರಿ ಕಾಂಪೌಂಡ್ ನಿಮಾರ್ಣಕ್ಕೆ 20 ಲಕ್ಷ ರೂ., ಕುಸ್ತಿ ಮೈದಾನ ನಿಮಾರ್ಣಕ್ಕೆ 75 ಲಕ್ಷ ರೂ., ಸ್ಮಶಾನಗಳ ಅಭಿವೃದ್ಧಿಗೆ 25ಲಕ್ಷ ರೂ., ವಿದ್ಯುತ್ ಶವಾಗಾರ ದಹನ ಯಂತ್ರ ಖರೀದಿಗೆ 50 ಲಕ್ಷ ರೂ. ಮೀಸಲಿರಿಸಲಾಗಿದೆ.
ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಅನುದಾನ ದುರುಪಯೋಗವಾಗುತ್ತಿದೆ. ಬಹುತೇಕ ವಾರ್ಡ್ಗಳಲ್ಲಿ ಸಮಸ್ಯೆ ಹೆಚ್ಚಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಬಹುತೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಚ್.ನಾಗೇಶ್ ಮಧ್ಯಪ್ರವೇಶಿಸಿ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರರ ಬಿಲ್ ತಡೆ ಹಿಡಿಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಉಪಾಧ್ಯಕ್ಷೆ ಭಾಗ್ಯಮ್ಮರಾಮಚಂದ್ರಯ್ಯ, ಸ್ಥಾಯಿಸಮಿತಿ ಅಧ್ಯಕ್ಷ ಜಗನ್ ಮೋಹನ್ರೆಡ್ಡಿ, ಸದಸ್ಯರಾದ ಎಸ್.ವೈ.ರಾಜಶೇಖರ್, ಜಿ.ನಾಗರಾಜ್, ಡಿ.ಸೋಮಣ್ಣ, ಟಿ.ಎಸ್.ಸುವರ್ಣ, ಪದ್ಮಾರಘು, ಮಲ್ಲಿಕಾರ್ಜುನ್, ಜಬೀವುಲ್ಲಾ, ಚಾಂದ್ಪಾಷಾ, ಗರಡಿ ಆರ್.ಶಂಕರಪ್ಪ, ಮುನಿರಾಜು ಇತರರು ಇದ್ದರು.