

ಕಾರವಾರ: ಜಿಲ್ಲೆಯಲ್ಲಿ 63 ಜನರಿಗೆ ಕರೊನಾ ಇರುವುದು ಬುಧವಾರ ಖಚಿತವಾಗಿದೆ. ಗುಣ ಹೊಂದಿದ 96 ಜನರನ್ನು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯ ಅಂಕೋಲಾದಲ್ಲಿ 2, ಭಟ್ಕಳದಲ್ಲಿ 10,ದಾಂಡೇಲಿ ಹಾಗೂ ಹಳಿಯಾಳದಲ್ಲಿ 16, ಕಾರವಾರದಲ್ಲಿ 21, ಕುಮಟಾದಲ್ಲಿ 11, ಮುಂಡಗೋಡಿನಲ್ಲಿ 2, ಸಿದ್ದಾಪುರದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.
ಕಾರವಾರ ಸೀಬರ್ಡ್ ನೌಕಾನೆಲೆಯಲ್ಲೇ ಕ್ವಾರಂಟೈನ್ನಲ್ಲಿದ್ದ 15 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ನೈತಿಸಾವರದ ಒಂದೇ ಕುಟುಂಬದ 6 ಜನರಿಗೂ ಕರೊನಾ ಕಾಣಿಸಿಕೊಂಡಿದೆ. ದಾಂಡೇಲಿ ನಗರದ ಆಜಾದನಗರದಲ್ಲಿ4, ವೇಸ್ಟ್ಕೋಸ್ಟ್ ಪೇಪರಮಿಲ್ನ ಕ್ವಾರ್ಟರ್ಸ್ ನಲ್ಲಿ 5 ಹಾಗೂ ಜೆ.ಎನ್.ರಸ್ತೆ, ಲೆನಿಲ್ ರಸ್ತೆ, ಮಾರುತಿನಗರದಲ್ಲಿಒಂದೊಂದು ಪ್ರಕರಣದಾಖಲಾಗಿವೆ.
ಗ್ರಾಪಂ ಸಿಬ್ಬಂದಿಗೂ ಸೋಂಕು: ಕುಮಟಾ ಸರ್ಕಾರಿ ಆಸ್ಪತ್ರೆಯ ನಾಲ್ವರು ನರ್ಸ್ಗಳು, ಒಬ್ಬ ಅಟೆಂಡರ್ಗೆ ಸೋಂಕು ತಗುಲಿದೆ. ಗೋಕರ್ಣ ಗ್ರಾಪಂ ಸಿಬ್ಬಂದಿಗೆ ಸೋಂಕು ತಗುಲಿದ್ದು, ಕಚೇರಿಯನ್ನು ಸೀಲ್ಡೌನ್ ಮಾಡಲಾಯಿತು. ಹಂದಿಗೋಣ, ಹಳಕಾರ, ಧಾರೇಶ್ವರ, ಅಳ್ವೇಕೋಡಿಯಲ್ಲೂ ಕರೊನಾ ಪ್ರಕರಣಗಳು ಕಂಡುಬಂದಿವೆ.
96 ಜನರಿಗೆ ಮುಕ್ತಿ: ಅಂಕೋಲಾದ 2, ಭಟ್ಕಳದ 5, ಹಳಿಯಾಳದ 2 ಹೊನ್ನಾವರದ 15, ಕಾರವಾರದ 18, ಕುಮಟಾದ 29, ಮುಂಡಗೋಡಿನ 1, ಶಿರಸಿಯ 2 ಹಾಗೂ ಯಲ್ಲಾಪುರದ 22 ಜನರು ಕರೊನಾದಿಂದ ಮುಕ್ತಿ ಪಡೆದಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕ್ರಿಮ್್ಸ ಆಸ್ಪತ್ರೆಯಲ್ಲಿ ಕಾರವಾರ ಹಾಗೂ ಯಲ್ಲಾಪುರದ ಯುವಕರು ಹಳಿಯಾಳದ ವೃದ್ಧ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ದೇವಳಮಕ್ಕಿಯ ಒಬ್ಬ ಗರ್ಭಿಣಿ ಹೆರಿಗೆಗಾಗಿ ಕಾಯುತ್ತಿದ್ದಾಳೆ ಎಂದು ಕ್ರಿಮ್್ಸ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಗೋಕರ್ಣ ಪಂಚಾಯಿತಿ ಸೀಲ್ಡೌನ್: ಗೋಕರ್ಣದ ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮ ಕಾರ್ವಿುಕರೊಬ್ಬರಿಗೆ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಂಚಾಯಿತಿ ದ್ವಾರ ಮುಚ್ಚಿ ಸೀಲ್ಡೌನ್ ಮಾಡಲಾಗಿದೆ. ಇದರ ಜೊತೆಗೆ ಈತ ನಿತ್ಯ ಹೋಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ವಿವಿಧ ಪ್ರದೇಶಗಳನ್ನು ಆರೋಗ್ಯ ಇಲಾಖೆ ಗುರುತಿಸಿ ಅಲ್ಲಿನ ಹಲವು ಜನರ ಪಟ್ಟಿ ಸಿದ್ಧಪಡಿಸಿದೆ. ಈ ಘಟನೆಯಿಂದಾಗಿ ಗೋಕರ್ಣದ ಕೆಲ ಕಡೆಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಈತ ಹೊನ್ನಾವರದ ತನ್ನ ನೆಂಟರ ಮನೆಗೆ ಹೋಗಿ ಬಂದಿದ್ದಲ್ಲದೆ ನೆಂಟರ ಪೈಕಿ ಕೆಲವರು ಇಲ್ಲಿ ಕೆಲ ದಿನ ತಂಗಿದ್ದು ಅವರಿಂದ ಸೋಂಕು ಬಂದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಅಂತ್ಯಸಂಸ್ಕಾರಕ್ಕೆ ಹೋದವರಿಗೂ ಕರೊನಾ ಕಾಟ!: ಇತ್ತೀಚೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಶಿರಸಿ ತಾಲೂಕಿನ ಮಹಿಳೆಯ ಶವ ಸಂಸ್ಕಾರದಲ್ಲಿ ಭಾಗಿಯಾದವರಿಗೆ ಇದೀಗ ಕರೊನಾ ಆತಂಕ ಶುರುವಾಗಿದೆ. ಮೃತಳಾದ ನಂತರ ಕೋವಿಡ್-19 ದೃಢಪಟ್ಟಿರುವುದು ಇದಕ್ಕೆ ಕಾರಣವಾಗಿದೆ. ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ತಾಲೂಕಿನ ಹೆಬ್ಬತ್ತಿಯ 40 ವರ್ಷದ ಮಹಿಳೆ ಜು. 11 ರಂದು ಹುಬ್ಬಳ್ಳಿಯ ಆಸ್ಪತ್ರೆಗೆ ಹೋಗಿದ್ದರು. ನಂತರ ಜು. 15ರಂದು ತೀವ್ರ ತೊಂದರೆಯಿಂದ ಬಳಲುತ್ತಿದ್ದ ಅವರು ಕಿಮ್ಸ್ಗೆ ದಾಖಲಾಗಿದ್ದರು. ನಂತರ ಜು. 16ರಂದು ಅಲ್ಲೇ ಮೃತಪಟ್ಟಿದ್ದರು. ನಂತರ ಮಹಿಳೆಯ ಗಂಟಲ ದ್ರವ ಸಂಗ್ರಹಣೆ ಮಾಡಲಾಗಿತ್ತು. ಆದರೆ, ವರದಿ ಬರುವ ಮೊದಲೇ ಅಲ್ಲಿಂದ ಮೃತರ ದೇಹವನ್ನು ಹೆಬ್ಬತ್ತಿಗೆ ತಂದು ಅಂತ್ಯ ಸಂಸ್ಕಾರ ಮಾಡಲಾಗಿದ್ದು, ಹತ್ತಿರದ ಸಂಬಂಧಿಕರು ಪಾಲ್ಗೊಂಡಿದ್ದರು. ಈಗ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು ಎನ್ನಲಾದ 8 ಕುಟುಂಬದ 27 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ವಣವಾಗಿದೆ