

ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ಕಾಮಿರ್ಕರಿಗಾಗಿ ಕಾರ್ಯಾಚರಣೆ ಮಾಡಲಾದ ಶ್ರಮಿಕ ವಿಶೇಷ ರೈಲಿನ ಮೂಲಕ 63.19 ಲಕ್ಷ ಜನರು ಪ್ರಯಾಣಿಸಿದ್ದಾರೆ. ಅದರಲ್ಲಿ ಕರ್ನಾಟಕದಿಂದ 4.17 ಲಕ್ಷ ಮಂದಿ ವಿವಿಧ ರಾಜ್ಯಗಳಿಗೆ ತೆರಳಿದ್ದಾರೆ.
ಕರೊನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಮಾಡಿತ್ತು. ಅದರಿಂದಾಗಿ ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಸೇರಿ ಇನ್ನಿತರ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾಮಿರ್ಕರಿಗೆ ಉದ್ಯೋಗವಿಲ್ಲದೆ ಆಹಾರಕ್ಕೂ ಸಮಸ್ಯೆ ಅನುಭವಿಸುವಂತಾಗಿತ್ತು. ಆ ಹಿನ್ನೆಲೆಯಲ್ಲಿ ಸುರತವಾಗಿ ಕಾಮಿರ್ಕರು ಅವರ ಊರಿಗೆ ತೆರಳುವಂತೆ ಮಾಡಲು ಶ್ರಮಿಕ ವಿಶೇಷ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಅದರಂತೆ ಕರ್ನಾಟಕದಿಂದ 295 ರೈಲುಗಳ ಮೂಲಕ, 4.17 ಲಕ್ಷ ಮಂದಿ ತವರು ರಾಜ್ಯಗಳಿಗೆ ತೆರಳಿದ್ದಾರೆ.
ಬಿಹಾರಕ್ಕೆ ಹೆಚ್ಚು ರೈಲು ಸಂಚಾರ: ರಾಜ್ಯದಿಂದ ಜಮ್ಮುಕಾಶ್ಮೀರ ಮತ್ತು ಕಾಶ್ಮೀರ, ಮಣಿಪುರ, ಚತ್ತೀಸ್ಗಢ, ಒರಿಸ್ಸಾ, ಮಿಜೋರಾಂ, ಹಿಮಾಚಲಪ್ರದೇಶ, ನಾಗಲ್ಯಾಂಡ್ ಸೇರಿ ಒಟ್ಟು 17 ರಾಜ್ಯಗಳಿಗೆ ಶ್ರಮಿಕ ವಿಶೇಷ ರೈಲುಗಳು ಸಂಚರಿಸಿವೆ. ಆ ಪೈಕಿ ಬಿಹಾರಕ್ಕೆ ಅತಿಹೆಚ್ಚು ರೈಲು ತೆರಳಿದ್ದರೆ, ಉತ್ತರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಸ್ಸಾ ರಾಜ್ಯಗಳಿಗೆ ಸಂಚರಿಸಿವೆ. ಬಿಹಾರಕ್ಕೆ 1.18 ಲಕ್ಷ ಮಂದಿ, ಉತ್ತರಪ್ರದೇಶಕ್ಕೆ 84 ಸಾವಿರ, ಅಸ್ಸಾಂ 82 ಸಾವಿರ, ಪಶ್ಚಿಮ ಬಂಗಾಳಕ್ಕೆ 40 ಸಾವಿರ, ಜಾರ್ಖಂಡ್ಗೆ 30 ಸಾವಿರ, ಒರಿಸ್ಸಾಗೆ 26 ಸಾವಿರ, ರಾಜಸ್ತಾನಕ್ಕೆ 12 ಸಾವಿರ, ಮಧ್ಯಪ್ರದೇಶಕ್ಕೆ 7 ಸಾವಿರ, ತ್ರಿಪುರಕ್ಕೆ 6 ಸಾವಿರ ಮಂದಿ ಸೇರಿದಂತೆ ಒಟ್ಟು 4.17 ಲಕ್ಷ ಮಂದಿ ರಾಜ್ಯದಿಂದ ಹೊರರಾಜ್ಯಗಳಿಗೆ ಪ್ರಯಾಣಿಸಿದ್ದಾರೆ.
ದೇಶದಲ್ಲಿ ಉತ್ತರ ಪ್ರದೇಶಕ್ಕೆ ಹೆಚ್ಚು: ಇದೇ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 4,621 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದು, 63,19,618 ಮಂದಿ ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಆ ಪೈಕಿ ಗುಜರಾತ್ನಿಂದ ಅತಿಹೆಚ್ಚು 1,033 ಶ್ರಮಿಕ ವಿಶೇಷ ರೈಲುಗಳು ಹೊರರಾಜ್ಯಗಳಿಗೆ ತೆರಳಿವೆ. ನಂತರ ಮಹಾರಾಷ್ಟ್ರದಿಂದ 817, ಪಂಜಾಬ್ನಿಂದ 429, ಉತ್ತರಪ್ರದೇಶದಿಂದ 376, ಬಿಹಾರದಿಂದ 294, ತಮಿಳುನಾಡಿನಿಂದ 292, ಕೇರಳದಿಂದ 190, ತೆಲಂಗಾಣದಿಂದ 166, ರಾಜಸ್ತಾನದಿಂದ 131 ಸೇರಿದಂತೆ ವಿವಿಧ ರಾಜ್ಯಗಳಿಂದ ನೂರಕ್ಕೂ ಅಧಿಕ ಶ್ರಮಿಕ ವಿಶೇಷ ರೈಲುಗಳು ಸಂಚರಿಸಿವೆ. ಈ ಎಲ್ಲದರಿಂದ ರೈಲ್ವೆ ಇಲಾಖೆ ಮತ್ತು ಆಯಾ ರಾಜ್ಯ ಸರ್ಕಾರಗಳಿಗೆ 433 ಕೋಟಿ ರೂ. ಆದಾಯ ಬಂದಿದೆ.
ಉತ್ತರ ಪ್ರದೇಶಕ್ಕೆ ಹೆಚ್ಚು ರೈಲು: ರೈಲು ತೆರಳಿದ್ದನ್ನು ಹೊರತುಪಡಿಸಿ ಉತ್ತರ ಪ್ರದೇಶಕ್ಕೆ ಅತಿಹೆಚ್ಚು ರೈಲುಗಳು ಬಂದಿವೆ. ಆ ರಾಜ್ಯಕ್ಕೆ 1,726 ರೈಲುಗಳು ವಿವಿಧ ರಾಜ್ಯಗಳಿಂದ ಬಂದಿದ್ದರೆ, ಬಿಹಾರಕ್ಕೆ 1,627 ರೈಲುಗಳು ಬಂದಿವೆ.