

ವಿಜಯಪುರ : ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ಕೋರಮಂಗಲ ಹೊರವಲಯದಲ್ಲಿರುವ ಬಯಲು ಕಾರಾಗೃಹದ ಆವರಣದಲ್ಲಿ 600 ಬಂಧಿಗಳ ಸಾಮರ್ಥ್ಯದ ನೂತನ ಕೇಂದ್ರ ಕಾರಾಗೃಹದ ವಸತಿಯೇತರ ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದಕ್ಕಾಗಿ ಇಲ್ಲಿನ ವಿವಿಧ ಜಾತಿಯ 626 ಮರಗಳನ್ನು ತೆರವು ಮಾಡಲು ಹೊರಟಿರುವ ಅರಣ್ಯ ಇಲಾಖೆ ಅಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿವೆ.
ಕೇಂದ್ರ ಕಾರಾಗೃಹದ ವಸತಿಯೇತರ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಗುರುತಿಸಿದ್ದು, ಕೋರಮಂಗಲ ಬಯಲು ಕಾರಾಗೃಹದ ಆವರಣದಲ್ಲಿ ಸರ್ವೇ ನಂಬರ್ 100ರಲ್ಲಿ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಬಯಲು ಬಂಧಿಖಾನೆಯ 113 ಎಕರೆ ಪ್ರದೇಶದಲ್ಲಿ 26 ಎಕರೆ ಜಮೀನಿನಲ್ಲಿ ಬೆಳೆದಿರುವ ಮರಗಳ ತೆರವಿಗೆ ಇಲಾಖೆ ಪ್ರಕಟಣೆ ಹೊರಡಿಸಿದೆ. 480 ಹೆಬ್ಬೇವು ಮರಗಳು, 133 ಮಾವಿನ ಮರಗಳು, 6 ಬೇವಿನ ಮರಗಳು ಸೇರಿ ನೇರಳೆ, ಸೀಮೆತಂಗಡಿ ಕಾಡು ಜಾತಿಯ ಮರಗಳು ಬಲಿಯಾಗಲಿವೆ ಎಂಬ ಆತಂಕ ಎದುರಾಗಿದೆ.
ಕಾಲಮಿತಿಗೆ ಆಕ್ಷೇಪ: ಕಾರಾಗೃಹ ಪ್ರದೇಶವು ಸಾರ್ವಜನಿಕರ ಪ್ರವೇಶಕ್ಕೆ ರ್ನಿಬಂಧಿತವಾಗಿದೆ, ವೀಕ್ಷಣೆ ಮಾಡಲು ಪ್ರಕಟಣೆಯಲ್ಲಿ ಕೊಟ್ಟಿರುವ 10 ದಿನಗಳ ಕಾಲಾವಕಾಶವೂ ಕಡಿಮೆ ಇದೆ. ಇದರಿಂದ ಆೇಪಣೆ ಸಲ್ಲಿಸಲು ಬಯಸುವ ಪರಿಸರ ಕಾರ್ಯಕರ್ತರು ನಿಗದಿತ ಕಾರಾಗೃಹ ಪ್ರದೇಶಕ್ಕೆ ಭೇಟಿಕೊಟ್ಟು, ಅಲ್ಲಿನ ಸ್ಥಳ ಪರಿಶೀಲನೆ ಮಾಡಿ, ಅಲ್ಲಿರುವ ಪರಿಸರ ಮತ್ತು ಜೀವ ವೈವಿಧ್ಯ ಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂಬ
ಆಕ್ಷೇಪ ವ್ಯಕ್ತವಾಗಿದೆ.
ಬದಲಿ ಸಸಿ ನೆಡುವವರ್ಯಾರು? : ಅರಣ್ಯ ಇಲಾಖೆಯು ಕಡಿಯಲು ಹೊರಟಿರುವ 626 ಮರಗಳ ಬದಲಾಗಿ, ಅದರ 10 ಪಟ್ಟು ಅಂದರೆ 6260 ಮರಗಳನ್ನು, ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ 1976 ಮತ್ತು ಕರ್ನಾಟಕ ಅರಣ್ಯ ಸಂರಕ್ಷಣಾ ಮರಗಳ ನಿಯಮಗಳು 1977 ಪ್ರಕಾರ ನೆಟ್ಟಿದ್ದಾರೆಯೇ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕಿದೆ. ಆದರೆ ಈ ಬಗ್ಗೆ ಎಲ್ಲಿಯೂ ಪ್ರಕಟಣೆ ಕಂಡುಬಂದಿಲ್ಲದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇಲಾಖೆಯಿಂದಲೇ ಮರಗಳನ್ನು ಬೆಳೆಸಲಾಗಿದೆ, ಅಷ್ಟೊಂದು ಮರಗಳು ಒಂದೇ ಕಡೆ ಸಿಗುವುದೇ ಅಪರೂಪ ಎಂಬಂತಹ ಸನ್ನಿವೇಶವಿದೆ. ಇಂಥ ಸಂದರ್ಭದಲ್ಲಿ ಕಾರಾಗೃಹ ನಿರ್ಮಾಣಕ್ಕೆ ಅಷ್ಟೊಂದು ಮರಗಳನ್ನು ಬಲಿ ಕೊಡುವುದು ಸರಿಯಲ್ಲ. ಆದ್ದರಿಂದ ಸಾಧ್ಯವಾದಷ್ಟು ಮರಗಳನ್ನು ರಕ್ಷಣೆ ಮಾಡಿ ಕಟ್ಟಡ ನಿರ್ಮಿಸಿದರೆ ನಮ್ಮ ಅಭ್ಯಂತರವಿಲ್ಲ. ಈ ಬಗ್ಗೆ ನಾವೆಲ್ಲ ಸ್ಥಳ ಪರಿಶೀಲನೆ ಮಾಡಿದ್ದೇವೆ, ಮಂತ್ರಿಗಳು ಹಾಗೂ ಸಂಬಂಧಪಟ್ಟವರ ಗಮನಕ್ಕೂ ತರಲಾಗುವುದು. | ಕಾರಹಳ್ಳಿ ಶ್ರೀನಿವಾಸ್, ರೈತಪರ ಹೋರಾಟಗಾರ ದೇವನಹಳ್ಳಿ 50 ಮರಗಳಿಗೆ ಮೇಲ್ಪಟ್ಟು ಮರಗಳನ್ನು ಕಡಿಯಲು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಅದರಂತೆ ಪ್ರಕಟಣೆ ಹೊರಡಿಸಲಾಗಿದೆ. ಸಾರ್ವಜನಿಕ ಆಕ್ಷೇಪಣೆ ಸಲಹೆ ಸೂಚನೆಗಳಿಗೆ 10 ದಿನದ ಕಾಲಾವಕಾಶ ನೀಡಲಾಗಿದೆ. ಅದರಂತೆ ಕಾಲಾವಧಿ ಮುಗಿದ ಬಳಿಕ ಬರುವ ಆಕ್ಷೇಪಣೆ ಸಲಹೆ ಸೂಚನೆಗಳ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ನಂತರ ಸರ್ಕಾರದ ಆದೇಶ ಪಾಲನೆ ಮಾಡಲಾಗುತ್ತದೆ. | ಸಂತೋಷ್ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂ ಗ್ರಾಮಾಂತರ ಅರಣ್ಯ ಇಲಾಖೆ ಸಾರ್ವಜನಿಕ ಪ್ರಕಟಣೆಯಲ್ಲಿರುವ ಮಾಹಿತಿ ಅಪೂರ್ಣವಾಗಿದೆ. ಬಯಲು ಕಾರಾಗೃಹ ಎಲ್ಲಿದೆ? ಯಾವ ಗ್ರಾಮಕ್ಕೆ ಸೇರಿದ್ದು, ಯಾವ ಜಾತಿಯ ಮರಗಳು ಇವೆ, ಎಷ್ಟು ಮರಗಳಿಗೆ? ಎಷ್ಟು ಕಡಿಯಲಾಗುತ್ತದೆ ಎಂಬ ಮಾಹಿತಿಗಳನ್ನು ಅವರು ಒದಗಿಸಿಲ್ಲ. ಬಂಧಿಖಾನೆ ನಿರ್ಮಾಣಕ್ಕೆ ಮರಗಳ ಹನನ ಮಾಡುವುದು ಸರಿಯಲ್ಲ. | ಆಂಜನೇಯರೆಡ್ಡಿ, ಕಾರ್ಯಾಧ್ಯಕ್ಷ ಪರಿಸರಕ್ಕಾಗಿ ನಾವು ಸಂಟನೆ