ರಾಜ್ಯೋತ್ಸವ ಪ್ರಶಸ್ತಿಗೆ 6,210 ಹೆಸರು ಶಿಫಾರಸು

Rajyotsava
Published on

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆನ್​ಲೈನ್ ಹಾಗೂ ಭೌತಿಕವಾಗಿ ಒಟ್ಟು 6,210 ಜನರ ಹೆಸರು ಸಲಹಾ ಸಮಿತಿ ಎದುರು ಸಲ್ಲಿಕೆಯಾಗಿದೆ.

ಸೇವಾ ಸಿಂಧು ಪೋರ್ಟಲ್​ನಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ 28,857 ಜನರು 4,770 ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ. ಭೌತಿಕವಾಗಿ ಇಲಾಖೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮೂಲಕ 1,440 ಅರ್ಜಿಗಳು ಬಂದಿವೆ. ಸಾಮಾನ್ಯವಾಗಿ 1000-1300ರ ಆಸುಪಾಸಿನಲ್ಲಿರುತ್ತಿದ್ದ ಒಟ್ಟು ಹೆಸರುಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದ್ದು, ಸಮಿತಿಗೆ ಆಯ್ಕೆ ಸವಾಲು ಎದುರಾಗಿದೆ.

ಅ.18ಕ್ಕೆ ಮೊದಲ ಪಟ್ಟಿ: ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೆಸರುಗಳು ಸಲ್ಲಿಕೆಯಾಗಿರುವುದರಲ್ಲಿ ಅರ್ಹರನ್ನು ಆಯ್ಕೆ ಮಾಡುವ ಹೊಣೆ ಇದೀಗ ಆಯ್ಕೆ ಸಮಿತಿ ಸದಸ್ಯರ ನಡುವೆ ರಚಿಸಲಾಗಿರುವ ಉಪಸಮಿತಿಗಳ ಮೇಲೆ ಬಿದ್ದಿದೆ. ಅ.18ರ ವೇಳೆಗೆ ಎಲ್ಲ ಉಪಸಮಿತಿಗಳೂ ತಂತಮ್ಮ ವಿಭಾಗವಾರು 1:3 ಅನುಪಾತದಲ್ಲಿ ಹೆಸರುಗಳನ್ನು ಆಯ್ಕೆ ಮಾಡಲಿವೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್​ಕುಮಾರ್ ನೇತೃತ್ವದಲ್ಲಿ ಈ ಪಟ್ಟಿಯನ್ನು 1:2ರ ಅನುಪಾತಕ್ಕೆ ಇಳಿಕೆ ಮಾಡಲಾಗುತ್ತದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ 66 ಹೆಸರುಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪೋರ್ಟಲ್​ನಲ್ಲಿ ಸಮಸ್ಯೆ

ರಾಜ್ಯದೆಲ್ಲೆಡೆ ಸೇವಾ ಸಿಂಧು ಪೋರ್ಟಲ್​ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅನೇಕರು ಅರ್ಜಿ ಸಲ್ಲಿಸುವುದರಿಂದ ವಂಚಿತರಾಗಿದ್ದಾರೆ. ಅನೇಕರಿಗೆ ಲಾಗಿನ್ ಆಗುವುದಕ್ಕೆ ಮೊಬೈಲ್​ಗೆ ಒಟಿಪಿ ಬಂದಿಲ್ಲ. ‘ಪೋರ್ಟಲ್​ನಲ್ಲಿ ಯಾವ ಭಾಷೆಯಲ್ಲಿ ಟೈಪ್ ಮಾಡಿದರೂ ತೆಗೆದುಕೊಳ್ಳಲಿಲ್ಲ. ಸರಳವಾಗಿ ಪಿಡಿಎಫ್ ಫೈಲ್ ಅಪ್​ಲೋಡ್ ಮಾಡಲು ಕೋರಿದ್ದರೆ ಸಮಸ್ಯೆ ಇರುತ್ತಿರಲಿಲ್ಲ’ ಎಂದು ತಂತ್ರಜ್ಞ ಯು.ಬಿ.ಪವನಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಅರ್ಜಿ ನಮೂನೆಯಲ್ಲೂ ದೋಷಗಳಿದ್ದವು ಎಂದು ಅನೇಕರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net