

ಲಕ್ಷ್ಮೇಶ್ವರ: ಪುರಸಭೆ ವ್ಯಾಪ್ತಿಯಲ್ಲಿ ಹಸಿ ಕಸ, ಒಣ ಕಸ ಸಂಗ್ರಹಿಸುವ ಸ್ಟೀಲ್ ಡಬ್ಬಿಗಳನ್ನು ಸ್ಥಾಪಿಸಲಾಗಿದ್ದು, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಗುರುವಾರ ಅವುಗಳಿಗೆ ಚಾಲನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಬೆಳೆಯುತ್ತಿರುವ ಪಟ್ಟಣದಲ್ಲಿ ಎಲ್ಲೆಡೆ ಕಸ ಸಂಗ್ರಹ ಹೆಚ್ಚಾಗುತ್ತಿದೆ. ಸರಿಯಾಗಿ ವಿಲೇವಾರಿ ಮಾಡುವುದು ಪುರಸಭೆಯ ಕರ್ತವ್ಯವಾಗಿದೆ. ಆದರೆ, ಪಟ್ಟಣದ ಜನನಿಬಿಡ ರಸ್ತೆಗಳ ಬದಿಯಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಹಾಕುವುದೇ ಸವಾಲಾಗಿದೆ. ಈ ಕಾರ್ಯ ಸುಲಭಗೊಳಿಸಲು ಸ್ಟೀಲ್ ಡಬ್ಬಿಗಳನ್ನು ಇಡಲಾಗಿದ್ದು, ಜನತೆ ಸಹಕಾರ ನೀಡಬೇಕು ಎಂದು ಹೇಳಿದರು.
ಜನರು ಕಸವನ್ನು ಗಟಾರದಲ್ಲಿ ಚೆಲ್ಲುವ ಬದಲು ಈ ಡಬ್ಬಿಗಳಲ್ಲಿ ಸುರಿಯಬೇಕು. ಅಂದಾಜು 6 ಲಕ್ಷ ರೂ. ವೆಚ್ಚದಲ್ಲಿ 62 ಸ್ಟಿಲ್ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ಜನರೇ ಹೆಚ್ಚು ಓಡಾಡುವ ದೇವಸ್ಥಾನ, ಮುಖ್ಯ ಬಜಾರ್, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ ಸೇರಿ ಹೆಚ್ಚು ಕಡೆ ಕಸ ಉತ್ಪಾದನೆ ಆಗುವ ಜಾಗದಲ್ಲಿ ಅಳವಡಿಸಲಾಗುವುದು. ಸಾರ್ವಜನಿಕರು ಹಸಿ ಕಸ, ಒಣ ಕಸ ಬೇರ್ಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪುರಸಭೆಯಲ್ಲಿ ಪೌರಕಾರ್ಮಿಕರ ಕೊರತೆ ಇದ್ದು, ಸರ್ಕಾರಕ್ಕೆ ಈ ಕುರಿತು ಮನವಿ ಮಾಡಲಾಗಿದೆ ಎಂದರು.
ಹಿರಿಯರಾದ ಚನ್ನಪ್ಪ ಕೋಲಕಾರ, ಪುರಸಭೆ ಸದಸ್ಯರಾದ ರಾಜೀವ ಕುಂಬಿ, ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ವಿಜಯ ಕರಡಿ, ರಮೇಶ ಗಡದವರ, ಕಿರಣ ನವಲೆ, ನೀಲಪ್ಪ ಪೂಜಾರ, ಪ್ರಕಾಶ ಕೊಂಚಿಗೇರಿಮಠ, ಸಿದ್ದು ದುರಗಣ್ಣವರ, ಪುರಸಭೆ ಸಿಬ್ಬಂದಿ ನೇತ್ರಾ ಹೊಸಮನಿ, ಬಸವೆಣೆಪ್ಪ ನಂದೆಣ್ಣವರ, ಉಮಾ ಬೆಳವಿಗಿ, ಸಿದ್ದಪ್ಪ ಬಾಲೆಹೊಸೂರ, ಸಿದ್ದು ಹಿರೇಮಠ ಇತರರಿದ್ದರು.