

ಭದ್ರಾವತಿ: ನಗರಸಭೆಯ ಸ್ವಂತ ಆದಾಯಗಳಾದ ಸ್ವಯಂ ಘೋಷಿತ ಆಸ್ತಿತೆರಿಗೆ, ನೀರಿನ ತೆರಿಗೆ ಮತ್ತು ಇತರ ಆದಾಯ ಹಾಗೂ ಸರ್ಕಾರದ ಅನುದಾನಗಳು ಸೇರಿ ಒಟ್ಟು 61.99 ಕೋಟಿ ರೂ.ಗಳ ನಿರೀಕ್ಷೆ ಇಟ್ಟುಕೊಂಡು 2024-25ನೇ ಸಾಲಿನ ಬಜೆಟ್ ತಯಾರಿಸಲು ನಿರ್ಧರಿಸಲಾಗಿದೆ ಎಂದು ನೂತನ ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಬುಧವಾರ ಹಿರಿಯ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರಿಗೆ ಜತೆಗಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಗರಸಭೆಯ ಸ್ವಂತ ಆದಾಯಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ಬಾಡಿಗೆಗಳು, ಉದ್ದಿಮೆ ಪರವಾನಗಿ ಇತರ ಆದಾಯಗಳಿಂದ ಬರುವ 13.45 ಕೋಟಿ ರೂ.ಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರಬಹುದಾದ 48.54 ಕೋಟಿ ರೂ.ಗಳು ಸೇರಿ ಒಟ್ಟು 61.99 ಕೋಟಿ ರೂ.ಗಳ ನಿರೀಕ್ಷಿತ ಆದಾಯದಲ್ಲಿ ನಗರದ 35 ವಾರ್ಡ್‌ಗಳ ಅಭಿವದ್ದಿಗಾಗಿ ಸಂಪೂರ್ಣ ಹಣವನ್ನು ವಿನಿಯೋಗಿಸಿಕೊಳ್ಳಲಾಗುವುದು ಎಂದರು.
ಬೀದಿ ದೀಪಗಳ ನಿರ್ವಹಣೆ, ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಕಾಮಗಾರಿ, ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಅಭಿವೃದ್ಧಿ, ಉದ್ಯಾನ ಮತ್ತು ಕೆರೆ ಅಭಿವೃದ್ಧಿ, ಸ್ವಚ್ಛ ಭಾರತ್ ಮಿಷನ್ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಲ್ಲದೆ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ಸರ್ಕಾರದಿಂದ 15 ಕೋಟಿ ರೂ.ಗಳ ವಿಶೇಷ ಅನುಧಾನವನ್ನು ತಂದಿದ್ದು ಎಲ್ಲ ವಾರ್ಡಿಗೂ ಹಂಚಿಕೆ ಮಾಡುವ ಮೂಲಕ ಮೂಲ ಸೌಕರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುತ್ತೇನೆ. ನೀರಿನ ಸಮಸ್ಯೆ ನನ್ನ ವಾರ್ಡ್ ಸೇರಿದಂತೆ ಎಲ್ಲ ವಾರ್ಡ್‌ಗಳಲ್ಲಿಯೂ ಕಂಡು ಬರುತ್ತಿದೆ. ಹೆಚ್ಚುವರಿ ಟ್ಯಾಂಕ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆಳಿದರು.
ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪ ಮಾತನಾಡಿ, ನಿಮ್ಮೆಲ್ಲರ ಸಲಹೆ ಸೂಚನೆಯಂತೆ ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್‌ಗಳ ರಸ್ತೆ, ನೀರು, ಒಳಚರಂಡಿ ಕಾಮಗಾರಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ನಾಗರಿಕರ ತುರ್ತು ಸಮಸ್ಯೆಗಳನ್ನು ನಿವಾರಿಸಲು ನಗರಸಭೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಗರಸಭೆಗೆ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದು ರ್ಪೂ ಪ್ರಮಾಣದ ಸಮಸ್ಯೆಗಳನ್ನು ನಿವಾರಿಸಲು ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕೂಡ ಹಲವು ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿದ್ದು ಅನುದಾನದ ಕೊರತೆ ಎದುರಾಗಿದೆ. ಆದರೂ ಶಾಸಕರು ಸರ್ಕಾರಕ್ಕೆ 30 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದರು. ಆದರೆ 15 ಕೋಟಿ ರೂ ಬಿಡುಗಡೆಯಾಗಿದ್ದು 35 ವಾರ್ಡ್‌ಗಳ ಅಭಿವದ್ದಿಗೆ ಶ್ರಮಿಸಲಾಗುವುದು ಎಂದರು.
ಈಗಾಗಲೆ ರಸ್ತೆ ಒಳಚರಂಡಿ ಅಭಿವೃದ್ದಿ ಕಾಮಗಾರಿಗಾಗಿ 34 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ನಮ್ಮದೆ ಸರ್ಕಾರ ಇರುವುದರಿಂದ ಮುಂದಿನ ದಿನಗಳಲ್ಲಿ ನಗರವು ಸಾಕಷ್ಟು ಅಭಿವೃದ್ಧಿ ಹೊಂದಲಿದೆ. ಅದಕ್ಕಾಗಿ ಶಾಸಕರೂ ಸಹ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ ಎಂದು ಹೇಳಿದರು. ಉಪಾಧ್ಯಕ್ಷೆ ಸರ್ವಮಂಗಳಾ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಇದ್ದರು.
ಮನೆ ಮಾಲೀಕರ ಸಂಘದಿಂದ ಪ್ರತಿ ವರ್ಷ ಸಲಹೆ- ಸೂಚನೆಗಳನ್ನು ನೀಡುತ್ತಿರುತ್ತೇವೆ. ಆದರೆ ಯಾವುದೂ ಯಾವ ಸಲಹೆಯೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಮನೆ ಹಾಗೂ ನೀರಿನ ಕಂದಾಯ ಪಾವತಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದರೂ ಪ್ರಯೋಜನವಾಗುತ್ತಿಲ್ಲ. ಹಣ ಪಾವತಿಸಲು ಕಚೇರಿಗೆ ಬಂದರೆ ಹಣ ಕಟ್ಟಲು ಹಾಗೂ ರಸೀದಿ ಹಾಕಿಸಲು ಬೇರೆ ಬೇರೆ ಸಾಲಿನಲ್ಲಿ ನಿಲ್ಲಬೇಕು. ನೀರು ಮೂಲ ಸೌಕರ್ಯಗಳಲ್ಲಿ ಒಂದಾಗಿದ್ದು ನೀರಿನ ಶುಲ್ಕ ಹೆಚ್ಚಿಸಬೇಡಿ ಎಂದು ಮನೆ ಮಾಲೀಕರ ಸಂಘದ ಗೌರವಾಧ್ಯಕ್ಷ ಇಂದುಶೇಖರಯ್ಯ ಹೇಳಿದರು. ಬಸವೇಶ್ವರ ವೃತ್ತದಿಂದ ಸಂಚಿಯ ಹೊನ್ನಮ್ಮ ಶಾಲೆಯ ಮೂಲಕ ತಾಲೂಕು ಕಚೇರಿಯವರೆಗೆ 93 ಲಕ್ಷ ರೂ.ಗಳಲ್ಲಿ ಕೈಗೊಂಡಿರುವ ಸೈಕಲ್ ಪಾತ್ ಕಾಮಗಾರಿ ಅವೈಜ್ಞಾನಿಕವಾಗಿದ್ದು ರಸ್ತೆಯಿಂದ 2 ಅಡಿ ಎತ್ತರದಲ್ಲಿ ಸೈಕಲ್ ಪಾತ್ ನಿರ್ಮಿಸಿದರೆ ಸಂಚಾರ ಹೇಗೆ ಸಾಧ್ಯ? ಕೂಡಲೆ ಕಾಮಗಾರಿ ಸ್ಥಗಿತಗೊಳಿಸಿ. ಫುಡ್‌ಕೋರ್ಟ್ ನಿರ್ಮಾಣ ಮಾಡುವುದಾಗಿ ಕಳೆದ 4 ವರ್ಷಗಳಿಂದ ಹೇಳುತ್ತಿದ್ದೀರಿ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.
ಸೀಗೇಬಾಗಿಯ ವಸಂತ ಪೂಜಾರಿ, ನಮ್ಮ ಬಡಾವಣೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. 15 ಕೊಡ ನೀರು ಸಹ ಬರುವುದಿಲ್ಲ. ಹೆಚ್ಚುವರಿ ಟ್ಯಾಂಕ್ ನಿರ್ಮಿಸಿ ಎಂದು ಮನವಿ ಮಾಡಿದರೆ, ನ್ಯೂಟೌನ್ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವಂತೆಯೂ ಹಾಗೂ ಫುಡ್‌ಕೋರ್ಟ್ ತೆರೆಯುವಂತೆಯೂ ನಾಗರಾಜ್ ಮನವಿ ಮಾಡಿದರು.