

ರಾಮದುರ್ಗ: ಸರಾಫ್ ವ್ಯಾಪಾರಸ್ಥರ ಮನೆಗೆ ಕನ್ನ ಹಾಕಿರುವ ಕಳ್ಳರು 62.91 ಲಕ್ಷ ರೂ. ವೌಲ್ಯದ 1,214 ಗ್ರಾಂ ಚಿನ್ನಾಭರಣ ದೋಚಿದ ಘಟನೆ ಪಟ್ಟಣದ ಮಹಾಂತೇಶ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಇಲ್ಲಿನ ಬಾಪು ಗೋವಿಂದ ಪತ್ತೇಪುರ ಕೆಲಸದ ನಿಮಿತ್ತ ಬೇರೆಡೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಖದೀಮರು ಮನೆಯಲ್ಲಿನ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಬಾಪು ಪತ್ತೇಪುರ ಅವರ ಸಹೋದರ ವೀರೇಶ ಪತ್ತೇಪುರ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ಪಿಎಸ್‌ಐ ಸವಿತಾ ಮುನ್ಯಾಳ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.