ಸರ್ಕಾರಿ ಶಾಲೆಗಳಿಗೆ 61 ಕೋಟಿ ರೂ. ಸಹಾಯಧನ

mysore
Published on

ಮೈಸೂರು: ಜ್ಞಾನದೀಪ ಶಿಕ್ಷಣದಡಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸರ್ಕಾರಿ ಶಾಲೆಗಳಿಗೆ ಕಲ್ಪಿಸಲಾದ ಸೌಲಭ್ಯಗಳ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಜವರೇಗೌಡ ಅವರಿಗೆ ಹಸ್ತಾಂತರಿಸಲಾಯಿತು.


ನಗರದ ಕಚೇರಿಯಲ್ಲಿ ಇತ್ತೀಚೆಗೆ ಭೇಟಿ ಮಾಡಿದ ಯೋಜನೆಯ ಮೈಸೂರು ಜಿಲ್ಲಾ ನಿರ್ದೇಶಕ ವಿ.ವಿಜಯ ಕುಮಾರ್ ನಾಗನಾಳ ಅವರು ಜಿಲ್ಲೆಯ ಸಾಧನಾ ವರದಿ ನೀಡಿದರು.


ಬಳಿಕ ವಿಜಯ ಕುಮಾರ್ ನಾಗನಾಳ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳ ಸುಧಾರಣೆಗಾಗಿ 30 ವರ್ಷ ಹಿಂದೆ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಅದರಂತೆ ಶಾಲೆಯ ಮೂಲಸೌಕರ್ಯಗಳಾದ ಶಾಲಾ ಕೊಠಡಿ, ಶೌಚಗೃಹ, ಆಟದ ಮೈದಾನ, ಶಾಲಾ ಆವರಣ, ವಿದ್ಯುದೀಕರಣ, ಕುಡಿಯುವ ನೀರು, ರಂಗಮಂದಿರ, ಕಟ್ಟಡಗಳ ದುರಸ್ತಿ, ಬೆಂಚು-ಡೆಸ್ಕ್ ಮೊದಲಾದವುಗಳಿಗೆ ಸಹಾಯಧನ ನೀಡಲಾಗುತ್ತಿದೆ. ಈ ವರೆಗೆ 61.16 ಕೋಟಿ ರೂ. ಮೊತ್ತದ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.


ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತ ಗಮನಿಸಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ.

ಈ ಸೇವೆ ಗ್ರಾಮೀಣ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಗಟ್ಟಲು ಸಂಸ್ಥೆ ವತಿಯಿಂದ ರೂಪಿಸಿದ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಈ ಶಿಕ್ಷಕರಿಗೆ ಮಾಸಿಕ ಗೌರವಧನವನ್ನು ಸಂಸ್ಥೆ ವತಿಯಿಂದಲೇ ಪಾವತಿಸಲಾಗುತ್ತಿದೆ. ಈ ವರೆಗೆ 21.33 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.


ಜಿಲ್ಲೆಯಲ್ಲಿ 75 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 605 ಬೆಂಚು- ಡೆಸ್ಕ್‌ಗಳನ್ನು ನೀಡಲಾಗಿದೆ. ರಾಜ್ಯಾದ್ಯಂತ ವಿವಿಧ ಶಾಲೆಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 1,030 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಯೋಜನೆಯ ಸೇವೆಯನ್ನು ಉಪನಿರ್ದೇಶಕರು ಮುಕ್ತಕಂಠದಿಂದ ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net