

ಉಡುಪಿ: ರಾಜ್ಯದಲ್ಲಿ 6000 ಪಶುವೈದ್ಯರ ನೇಮಕ ಶೀಘ್ರ ನಡೆಯಲಿದೆ. ಪ್ರತೀ ತಾಲೂಕಿನಲ್ಲಿ ಎರಡು ಸರ್ಕಾರಿ ಗೋಶಾಲೆ ನಿರ್ಮಿಸಲಾಗುವುದು . ಖಾಸಗಿ ಗೋಶಾಲೆಗಳಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಮಂಗಳವಾರ ಬೆಳಿಗ್ಗೆ ಪೇಜಾವರ ಮಠದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಗೋಹತ್ಯಾ ನಿಷೇಧ ಕಾನೂನು ಪರಿಣಾಮಕಾರಿ ಅಧ್ಯಾದೇಶ ಜಾರಿ ಮತ್ತು ಗೋರಕ್ಷಣೆಯ ಉಪಕ್ರಮಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು .
ಮಾತುಕತೆಯ ವೇಳೆ ಪೇಜಾವರ ಶ್ರೀಗಳು, ಗೋಮಾಳ ಭೂಮಿಗಳನ್ನು ಗೋಶಾಲೆಗೆ ಗುತ್ತಿಗೆ ನೀಡುವ ಬಗ್ಗೆ , ದೇವಳಗಳ ಮತ್ತು ಸಹಕಾರ ಸಂಘ ಬ್ಯಾಂಕ್ ಗಳ ಆದಾಯದ ಒಂದು ಭಾಗ ಗೋಶಾಲೆಗಳಿಗೆ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿರುವ ಬಗ್ಗೆ ತಿಳಿಸಿದರು . ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು .
ಗೋಹತ್ಯಾ ನಿಷೇಧ ಕಾನೂನು ಜಾರಿಗೆ ವಿಶೇಷ ಮುತುವರ್ಜಿ ವಹಿಸಿದ ಸಚಿವರನ್ನು ಪೇಜಾವರ ಶ್ರೀಗಳು ಸನ್ಮಾನಿಸಿದರು. ಗೋಹತ್ಯೆ ನಿಷೇಧ ಕಾನೂನು ಜಾರಿಗಾಗಿ ಸುದೀರ್ಘ ಹೋರಾಟ ನಡೆಸಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ವಿಶೇಷವಾಗಿ ಸ್ಮರಿಸಿದ ಮಂತ್ರಿಗಳು ಅವರ ಭವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಿದರು .
ಸಚಿವರ ಆಪ್ತ ಕಾರ್ಯದರ್ಶಿ ಡಾ. ಸುರೇಶ್ ಗೌಡ ಉಪಸ್ಥಿತರಿದ್ದರು . ಮಠದ ಪರವಾಗಿ ಕೃಷ್ಣ ಭಟ್, ವಾಸುದೇವ ಭಟ್, ವಿಷ್ಣುಮೂರ್ತಿ ಆಚಾರ್ಯ ಮಹೇಶ ಕುಲಕರ್ಣಿ ಸಚಿವರನ್ನು ಬರಮಾಡಿಕೊಂಡರು .