

ಬೆಳಗಾವಿ: ಕೋವಿಡ್-19 2ನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಶೀಲ್ಡ್ ನೀಡುವ ಕಾರ್ಯಕ್ಕೆ ವೇಗ ನೀಡಲು ನಿತ್ಯ 25 ಸಾವಿರ ಜನರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ 600 ಉಪಕೇಂದ್ರಗಳಲ್ಲೂ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡಬೇಕು ಎಂಬ ಉದ್ದೇಶದಿಂದ ಆರೋಗ್ಯ ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕರೊನಾ ನಿಯಂತ್ರಣಕ್ಕೆ ಎಲ್ಲರಿಗೂ ಲಸಿಕೆ ನೀಡಲು ಮುಂಬರುವ ದಿನಗಳಲ್ಲಿ ಜನರ ಬಳಿ ಹೋಗಿ ಲಸಿಕೆ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ನೆಗೆಟಿವ್ ವರದಿ ಕಡ್ಡಾಯ: ಮುನ್ನೆಚ್ಚರಿಕೆ ಕ್ರಮವಾಗಿ ನೆರೆಯ ಮಹಾರಾಷ್ಟ್ರದಿಂದ ಬೆಳಗಾವಿ ಮೂಲಕ ರಾಜ್ಯ ಪ್ರವೇಶಿಸುವ ಎಲ್ಲ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾರಿಗೆ ಬಸ್‌ನ ಚಾಲಕರು, ನಿರ್ವಾಹಕರು ಪ್ರಮಾಣ ಪತ್ರ ಇದ್ದರೆ ಮಾತ್ರ ಬಸ್‌ನಲ್ಲಿ ಪ್ರಯಾಣಿಸಲು ಅನುಮತಿ ನೀಡಬೇಕು. ಇಲ್ಲದಿದ್ದರೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ ಎಂದರು.
ಕ್ರಮದ ಎಚ್ಚರಿಕೆ: ಸರ್ಕಾರದ ನಿರ್ದೇಶನದಂತೆ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬ, ಉತ್ಸವ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಎಲ್ಲ ರೀತಿಯ ಧಾರ್ಮಿಕ ಆಚರಣೆ ಮನೆಯಲ್ಲಿಯೇ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ಜನರಿಗಿಂತ ಹೆಚ್ಚು ಸೇರಿದರೆ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲ ಗುವುದು ಎಂದರು. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸಲಾಪುರೆ, ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ರವೀಂದ್ರ ಕರಲಿಂಗಣ್ಣವರ ಇದ್ದರು.
ಕೋವಿಡ್-19 ಮಾರ್ಗಸೂಚಿ ಪಾಲಿಸುವಂತೆ ಸಾರ್ವಜನಿಕರಲ್ಲಿ ನಿರಂತರವಾಗಿ ಮನವಿ ಮಾಡಿಕೊಳ್ಳಲಾಗುತ್ತಿದ್ದರೂ ಕೆಲವೆಡೆ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿದ್ದಾರೆ. ಹೀಗಾಗಿ ದಂಡ ವಿಧಿಸುವ ಪ್ರಕ್ರಿಯೆ ಚುರುಕುಗೊಳಿಸಲು ನಿರ್ಧರಿಸಲಾಗಿದೆ. ರಾಜಕೀಯ ಪಕ್ಷಗಳು ಸೇರಿದಂತೆ ಯಾರೇ ಆಗಲಿ ಕೋವಿಡ್ ಮಾರ್ಗಸೂಚಿ ಮತ್ತು ಲೋಕಸಭಾ ಉಪಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. | ಡಾ.ಹರೀಶಕುಮಾರ ಜಿಲ್ಲಾಧಿಕಾರಿ, ಬೆಳಗಾವಿ