ತೆಲಂಗಾಣ ಚುನಾವಣೆಗೆ 600 ಕೋಟಿ ರೂ. ಬಳಕೆ !

BJP Chaluvadi narayanaswami
ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಟಿ.ಡಿ.ಮೇಘರಾಜ್, ಕೆ.ಜಿ.ಕುಮಾರಸ್ವಾಮಿ, ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಚಂದ್ರಶೇಖರ್, ಶಿವರಾಜ್, ಮಾಲತೇಶ್, ವಿನ್ಸಂಟ್ ರೋಡ್ರಿಗಸ್, ಪದ್ಮಿನಿ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ 2,500 ಕೋಟಿ ರೂ. ಮೀಸಲಿಟ್ಟಿದೆ. ಅದರಲ್ಲಿ ಈಗಾಗಲೇ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಜಯ್ ಸಿಂಗ್ ಅವರು 500ರಿಂದ 600 ಕೋಟಿ ರೂ. ಅನ್ನು ತೆಲಂಗಾಣ ಚುನಾವಣೆಗೆ ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಸಿದ್ದರಾಮಯ್ಯ ಅವರು ಮುಡಾ ಕೇಸ್‌ನಲ್ಲಿ ನಿವೇಶನಗಳನ್ನು ಹಿಂದಿರುಗಿಸಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಐದು ಎಕರೆ ಜಾಗವನ್ನು ವಾಪಸ್ ಕೊಟ್ಟಿದ್ದಾರೆ. ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಾವ್ಯಾಕೆ ಬಟ್ಟೆ ಹರಿದುಕೊಳ್ಳಬೇಕು. ತಲೆ ಇದ್ದವರಿಗೆ ತಲೆ ಕೆಡುತ್ತದೆ. ತಲೆಯೇ ಇಲ್ಲದವರಿಗೆ ಎಲ್ಲಿ ಕೆಡುತ್ತದೆ. ಪ್ರಿಯಾಂಕ್ ಖರ್ಗೆ ಮಾನಸಿಕ ಸ್ತಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಿತೂರಿ ಮಾಡಿ ಸರ್ಕಾರ ಗಲಭೆ ಕೇಸ್‌ಗಳನ್ನು ವಾಪಸ್ ಪಡೆಯುತ್ತಿದೆ. ಇದು ಕೂಡ ಕ್ರಿಮಿನಲ್ ಪ್ರಕರಣ ಆಗುತ್ತದೆ. ಹಾಗಾಗಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದಕ್ಕೆ ಯೋಗ್ಯವಲ್ಲ. ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಚಲವಾದಿ ನಾರಾಯಣಸ್ವಾಮಿ ತಿಳಿಸಿದರು. ಜನರೇ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಭಯೋತ್ಪಾದಕರು ಅವರ ಬ್ರದರ್ಸ್. ಪಾಕಿಸ್ತಾನಿಗಳು ಇವರ ಸಹೋದರರು. ಇದು ಕಾಂಗ್ರೆಸ್‌ನ ಅಲಿಖಿತ ನಿಯಮ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net