ರಾಜ್ಯಕ್ಕೆ 600 ಕೋಟಿ ರೂ. ಬಾಕಿ: ಕಬ್ಬು ಬೆಳೆಗಾರರಲ್ಲಿ ಚಿಗುರಿದ ಆಸೆ

Sugarcane
Published on

ಬೆಂಗಳೂರು: ಸಕ್ಕರೆ ರಫ್ತಿಗೆ ಪ್ರೋತ್ಸಾಹಧನ ನೀಡಲು ಕೇಂದ್ರ ಸಚಿವ ಸಂಪುಟ ತೀರ್ಮಾನ ಮಾಡುತ್ತಿದ್ದಂತೆ ರಾಜ್ಯದ ಕಬ್ಬು ಬೆಳೆಗಾರರರಿಗೆ ಬಾಕಿ ಇರುವ ತಮ್ಮ 600 ಕೋಟಿ ರೂ. ಬಿಡುಗಡೆಯಾಗಬಹುದೆಂಬ ಆಸೆ ಚಿಗುರೊಡೆದಿದೆ. ರಾಜ್ಯದಲ್ಲಿ ಕಳೆದ ವರ್ಷ 3.60 ಕೋಟಿ ಟನ್ ಕಬ್ಬು ಅರೆಯಲಾಗಿದೆ. ಇದರಿಂದ ಸುಮಾರು 3.40 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿರುವ ಅಂದಾಜಿದೆ. ಲಾಕ್​ಡೌನ್ ಹಾಗೂ ಇತರ ಕಾರಣಗಳಿಂದ ಶೇ. 50 ಸಕ್ಕರೆ ಕಾರ್ಖಾನೆಗಳಲ್ಲಿಯೇ ಉಳಿದಿದೆ. ಆದ್ದರಿಂದ ರೈತರಿಗೆ 600 ಕೋಟಿ ರೂ. ಬಾಕಿ ಉಳಿದಿದೆ. ಈ ವರ್ಷ ಸುಮಾರು 4 ಕೋಟಿ ಟನ್ ಕಬ್ಬು ಉತ್ಪಾದನೆಯಾಗಬಹುದೆಂದು ಅಂದಾಜು ಮಾಡಲಾಗಿದೆ.

ದೇಶದಲ್ಲಿ 12 ಸಾವಿರ ಕೋಟಿ ರೂ. ಬಾಕಿ: ಇಡೀ ದೇಶದಲ್ಲಿ ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ನೀಡಬೇಕಾಗಿರುವ ಬಾಕಿ ಸುಮಾರು 12 ಸಾವಿರ ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಮೊತ್ತ ಬಾಕಿ ಉಳಿದಿದೆ. ಆ ನಂತರ ಮಹಾರಾಷ್ಟ್ರ, ಕರ್ನಾಟಕ ಹಾಗೂ ಇತರ ರಾಜ್ಯಗಳಿವೆ. ಸಕ್ಕರೆ ರಫ್ತಿಗೆ ಉತ್ತೇಜನ ನೀಡುವುದರಿಂದ ಉತ್ತರ ಪ್ರದೇಶದ ರೈತರಿಗೆ ಹೆಚ್ಚಿನ ಅನುಕೂಲವಾಗಬಹುದೆಂದು ಹೇಳಲಾಗುತ್ತಿದೆ.

ಮಂಡ್ಯದಲ್ಲಿ ನಿರಾಸಕ್ತಿ: ಕೇಂದ್ರದ ಸಬ್ಸಿಡಿ ಪ್ಯಾಕೇಜ್​ನಲ್ಲಿ ಕೆಲ ನ್ಯೂನತೆ ಇರುವುದರಿಂದ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಆಸಕ್ತಿ ತೋರುತ್ತಿಲ್ಲ. ಸಹಾಯಧನ ಪಡೆಯುವ ಕಾರ್ಖಾನೆಗಳು ಕೇಂದ್ರ ಸರ್ಕಾರದ ಸೂಚನೆಯಂತೆ ನಿಗದಿಪಡಿಸಿದ ಬೇರೆ ದೇಶಗಳಿಗೆ ಸಕ್ಕರೆ ರಫ್ತು ಮಾಡಬೇಕು. ಆದರೆ ಈ ರೀತಿ ರಫ್ತು ಮಾಡುವ ಸಕ್ಕರೆಯ ಬೆಲೆ ಕಡಿಮೆ ಇರುತ್ತದೆ. ಜತೆಗೆ ಕಳೆದ ವರ್ಷ ರಫ್ತು ಮಾಡಿದ್ದ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ 22 ಕೋಟಿ ರೂ. ಅನುದಾನ ಬರಬೇಕಿದೆ. ಈ ಹಣ ಬಿಡುಗಡೆಯಾಗಿದ್ದರೆ ರೈತರು ಮತ್ತು ಕಾರ್ವಿುಕರಿಗೆ ಕೊಡಲು ಅನುಕೂಲವಾಗುತ್ತಿತ್ತು ಎನ್ನುವುದು ಅಧಿಕಾರಿಗಳ ಮಾಹಿತಿ. ಈ ಕೆಲ ಸಮಸ್ಯೆಯಿಂದ ಕಾರ್ಖಾನೆ ಸಹಾಯಧನ ಪಡೆಯಲು ಕಾರ್ಖಾನೆಗಳ ಮುಖ್ಯಸ್ಥರು ನಿರಾಸಕ್ತಿ ತೋರುತ್ತಾರೆಂದು ತಿಳಿದುಬಂದಿದೆ.

ಈವರೆಗೂ ಜಮಾ ಆಗದ ಸಬ್ಸಿಡಿ

ಹಳಿಯಾಳ: ಕಳೆದ ವರ್ಷವೂ 3,500 ರೂ. ಕೋಟಿ ವಿಶೇಷ ಪ್ಯಾಕೇಜ್ ನೀಡುವುದಾಗಿ ಸರ್ಕಾರ ಘೊಷಣೆ ಮಾಡಿತ್ತು. ಇದನ್ನು ನಂಬಿ ವಿದೇಶಕ್ಕೆ ಕೆಜಿಗೆ 23 ರೂ. ನಂತೆ ಸಕ್ಕರೆ ರಫ್ತು ಮಾಡಲಾಗಿತ್ತು. ಸರ್ಕಾರ ನೀಡ ಬೇಕಿದ್ದ ಸಬ್ಸಿಡಿ ಹಣ ಕೆ.ಜಿ.ಗೆ 10 ರೂ. ಈಗಲೂ ಪಾವತಿಸಿಲ್ಲ. ಹಳಿಯಾಳದ ಈಐಡಿ ಪ್ಯಾರಿ ಕಾರ್ಖಾನೆ ಕಳೆದ ವರ್ಷ 30,000 ಟನ್ ಸಕ್ಕರೆ ರಫ್ತು ಮಾಡಿದೆ. ಆದರೆ, ಈವರೆಗೂ ಸಬ್ಸಿಡಿ ಜಮಾ ಆಗಿಲ್ಲ. ಈ ವರ್ಷ ಸಕ್ಕರೆ ರಫ್ತು ಮಾಡುವುದರ ಬಗ್ಗೆ ನಮ್ಮ ಮುಖ್ಯ ಕಚೇರಿಯಿಂದ ನಿರ್ಧಾರ ಮಾಡಲಾಗುತ್ತದೆ ಎಂದು ಈಐಡಿ ಪ್ಯಾರಿ ಕಾರ್ಖಾನೆಯ ಅಧಿಕಾರಿ ತಿಳಿಸಿದ್ದಾರೆ.

ಸಕ್ಕರೆ ರಫ್ತು ಮಾಡುವ ಕಾರ್ಖಾನೆಗಳಿಗೆ 3,500 ಕೋಟಿ ರೂ. ಸಬ್ಸಿಡಿ ಘೊಷಣೆ ಮಾಡುವ ಮೂಲಕ ಕೇಂದ್ರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಆದರೆ ಅಧಿಸೂಚನೆಯಲ್ಲಿ ಯಾವ ಷರತ್ತು ಗಳನ್ನು ಹಾಕಿದ್ದಾರೆ ಎಂಬ ವಿವರಗಳನ್ನು ನೋಡಬೇಕು. ಒಟ್ಟಾರೆ ಉದ್ಯಮಿಗಳು ಮತ್ತು ರೈತರು ಇಬ್ಬರಿಗೂ ಇದರಿಂದ ಅನುಕೂಲವಾಗುತ್ತದೆ. | ಎಸ್.ಎಸ್. ಗಣೇಶ್ ದಾವಣಗೆರೆ ಶುಗರ್ಸ್ (ಕುಕ್ಕುವಾಡ) ವ್ಯವಸ್ಥಾಪಕ ನಿರ್ದೇಶಕ

ತಲಾ -ಠಿ;10 ಕೋಟಿ ನಿರೀಕ್ಷೆ

ಬೆಳಗಾವಿ: ಕೇಂದ್ರದ ಸಬ್ಸಿಡಿ ಮೊತ್ತದಲ್ಲಿ ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳಿಗೆ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಮೊತ್ತ ದೊರೆಯುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ 26 ಸಕ್ಕರೆ ಕಾರ್ಖಾನೆಗಳಿವೆ. ಪ್ರತಿ ಕಾರ್ಖಾನೆಗೆ 10 ಕೋಟಿ ರೂ. ಸಬ್ಸಿಡಿ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ. ಸಬ್ಸಿಡಿ ನೀಡುವ ಮೂಲಕ ಸಕ್ಕರೆ ಕಾರ್ಖಾನೆಗಳನ್ನು ಉತ್ತೇಜಿಸುತ್ತಿರುವುದು ಸ್ವಾಗತಾರ್ಹ ಎಂದು ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net