

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ವರ್ಷದಲ್ಲಿ 60 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಭವಿಷ್ಯದಲ್ಲಿ ರೈತರಿಗೆ ಹೆಚ್ಚಿನ ವಿದ್ಯುತ್ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಇಂಧನ ಇಲಾಖೆ ಶನಿವಾರ ಆಯೋಜಿಸಿದ್ದ ‘ರೈತ ಸೌರಶಕ್ತಿ ಮೇಳ’ದ ಉದ್ಘಾಟನೆ, ‘ಕುಸುಮ್’ ಬಿ ಮತ್ತು ಸಿ ಯೋಜನೆ ಹಾಗೂ ಹೊಸ ವಿದ್ಯುತ್ ಉಪಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಸ್ತುತ 32 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ರಾಜ್ಯವು ಸ್ವಾವಲಂಬಿಯಷ್ಟು ವಿದ್ಯುತ್ ಉತ್ಪಾದಿಸುತ್ತಿದ್ದರೂ, ಪಂಪ್‌ಸೆಟ್‌ಗಳಿಗೆ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಸಲು ಬೇಡಿಕೆ ಬರುತ್ತಿದೆ. ರೈತರಿಗೆ ನೀಡುತ್ತಿರುವ 7 ತಾಸು ನಿರಂತರ ವಿದ್ಯುತ್‌ನ್ನು ಇನ್ನೂ ಕೆಲ ಗಂಟೆ ವಿಸ್ತರಿಸಲು ಸರ್ಕಾರ ಸಿದ್ಧವಿದೆ. ಇದಕ್ಕಾಗಿ ನವೀಕರಿಸಬಹುದಾದ ಇಂಧನ ಸಹಿತ ಒಟ್ಟಾರೆ ವಿದ್ಯುತ್ ಉತ್ಪಾದನೆಯನ್ನು ಏಳು ವರ್ಷಗಳಲ್ಲಿ ದ್ವಿಗುಣಗೊಳಿಸಲಾಗುವುದು ಎಂದರು.
ರೈತರಿಗೆ ಆವಿಷ್ಕಾರ ತಲುಪಿಸಿ:
ಕರ್ನಾಟಕ ಸೌರ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದೆ. ಏಷ್ಯಾದಲ್ಲೇ ಅತೀ ದೊಡ್ಡದಾದ ಸೌರ ಪಾರ್ಕ್ ನಮ್ಮ ಅಧಿಕಾರಾವಧಿಯಲ್ಲೇ ಸ್ಥಾಪಿಸಲಾಗಿದೆ. ಈಗ ಇನ್ನಷ್ಟು ಸೌರೀಕರಣ ಯೋಜನೆಗಳನ್ನು ವಿಸ್ತರಿಸುವತ್ತ ಚಿತ್ತ ಹರಿಸಲಾಗಿದೆ. ಸೌರ ಕ್ಷೇತ್ರದಲ್ಲಿ ಶೋಧಿಸುವ ಹೊಸ ಆವಿಷ್ಕಾರಗಳನ್ನು ರೈತರಿಗೆ ತಲುಪಿಸಬೇಕು. ಕೃಷಿ ತಂತ್ರಜ್ಞಾನಗಳನ್ನೂ ರೈತರ ಮನೆ ಬಾಗಿಲಿಗೆ ತಲುಪಿಸಿದಾಗ ಮಾತ್ರ ವ್ಯವಸಾಯ ವಲಯದಲ್ಲಿ ಅವು ಬಳಕೆಯಾಗಿ ಸಾರ್ಥಕತೆ ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆ ನಡೆದಲ್ಲಿ ರೈತರ ಬೆಳೆ ವೈವಿಧ್ಯ ಹಾಗೂ ಇಳುವರಿ ಹೆಚ್ಚಳದಿಂದ ದೇಶದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರತಿಪಾದಿಸಿದರು.
ಸಬ್ಸಿಡಿ ಮೊತ್ತ ಹೆಚ್ಚಳ:
ಸೋಲಾರ್ ವಿದ್ಯುತ್ ಪಂಪ್‌ಸೆಟ್ ಹಾಗೂ ಪ್ಯಾನಲ್ಗಳಿಗೆ ಕೇಂದ್ರ ಸರ್ಕಾರ ಶೇ.30 ಸಬ್ಸಿಡಿ ನೀಡುತ್ತಿದೆ. ರಾಜ್ಯ ಸರ್ಕಾರದ ತನ್ನ ಸಬ್ಸಿಡಿ ಮೊತ್ತವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಿ ಒಟ್ಟಾರೆ ಶೇ.80 ಸಹಾಯಧನವು ರೈತರಿಗೆ ಸಿಗುವಂತೆ ಮಾಡಿದೆ. ಸರ್ಕಾರದ ಈ ಸೌಲಭ್ಯವನ್ನು ಕೃಷಿಕರು ಸದ್ಬಳಕೆ ಮಾಡಿಕೊಂಡು ಸೌರ ವಿದ್ಯುತ್ ಬಳಕೆಯನ್ನು ಹೆಚ್ಚೆಚ್ಚು ಉಪಯೋಗಿಸಿದರೆ ವಿದ್ಯುತ್ ಕೊರತೆಯನ್ನು ನೀಗಿಸಿಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ವಿವರಿಸಿದರು.
3,000 ಮೆ.ವ್ಯಾ. ಸೌರ ವಿದ್ಯುತ್ ಉತ್ಪಾದನೆ:
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಪೂರೈಸುವ ಯೋಜನೆಯಡಿ 10 ಎಚ್‌ಪಿ ವರೆಗೆ ಸಬ್ಸಿಡಿ ನೀಡಲಾಗುವುದು. ಲಾನುಭವಿಗಳಿಗೆ ತ್ವರಿತವಾಗಿ ಯೋಜನೆ ತಲುಪಿಸಲು ಆ್ಯಪ್ ಸಿದ್ಧಪಡಿಸಿದ್ದು, ಇದರ ಮೂಲಕವೇ ರೈತನು ತಾನು ಇಷ್ಟಪಟ್ಟ ಕಂಪನಿಯ ಸೌರ ಉಪಕರಣಗಳನ್ನು ಪಡೆದುಕೊಳ್ಳಬಹುದು. ಸೌರ ವಿಭಾಗದಿಂದ 3,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.
ವಿದ್ಯುತ್ ಕೊರತೆಗೆ ಬಿಜೆಪಿ ಸರ್ಕಾರ ಕಾರಣ:
2013-14ರಲ್ಲಿ ಸಿಎಂ ಆದ ವೇಳೆ 14 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. 17-18ರಲ್ಲಿ ಅಧಿಕಾರವಧಿ ಪೂರ್ಣಗೊಳ್ಳುವ ವೇಳೆಗೆ 28 ಸಾವಿರ ಮೆ.ವ್ಯಾ.ಗೆ ವಿಸ್ತರಿಸಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಇದೇ ವೇಗದಲ್ಲಿ ಉತ್ಪಾದನೆಯತ್ತ ಗಮನ ನೀಡದೆ 32 ಸಾವಿರ ಮೆ.ವ್ಯಾ.ಗೆ ಸೀಮಿತವಾಯಿತು. ಇದರ ಪರಿಣಾಮ ರಾಜ್ಯದಲ್ಲಿ ಬೇಡಿಕೆಯಷ್ಟು ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದನ್ನು ಅರಿತೇ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ವಿವಿಧ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಹಿಂದಿನ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸೌರೀಕರಣ ಯೋಜನೆಯಡಿ 40 ಸಾವಿರ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಪೂರೈಸಲು ಟೆಂಡರ್ ಕರೆಯಲಾಗಿದೆ. ರೈತರಿಗೆ ಯೋಜನೆಯ ಲಾಭ ತಲುಪಿಸಲು ಶೀಘ್ರವೇ ಅರ್ಜಿ ಆಹ್ವಾನಿಸಲಾಗುವುದು. ಕೃಷಿಕರಿಗೆ ಸೌರ ವಿದ್ಯುತ್ ಬಳಕೆ ಹಾಗೂ ಇತರ ಮಾಹಿತಿ ಒದಗಿಸಲು ಕೆಪಿಟಿಸಿಎಲ್ ಮೂಲಕ ತರಬೇತಿ ಕೊಡಿಸಲು ಚಿಂತನೆ ನಡೆದಿದೆ.
- ಟಿ.ಡಿ.ರಾಜೇಗೌಡ, ಕೆಆರ್‌ಇಡಿಎಲ್ ಅಧ್ಯಕ್ಷ
ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಯಡಿ ನಾಡಿನ 1.20 ಕೋಟಿ ಕುಟುಂಬಗಳು ಪ್ರಯೋಜನ ಪಡೆದುಕೊಂಡಿವೆ. ಇದಕ್ಕಾಗಿ ಈವರೆಗೆ 5,320 ಕೋಟಿ ರೂ. ಹಣವನ್ನು ಇಂಧನ ಇಲಾಖೆಗೆ ನೀಡಲಾಗಿದೆ. ಇದರಿಂದ ನಾಗರಿಕರಿಗೆ ಶೂನ್ಯ ಬಿಲ್ ಬರುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಉಪಯೋಗವಾಗುತ್ತಿದ್ದು, ಅವುಗಳನ್ನು ಮುಂದುವರೆಸಲಿದ್ದೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ