ಮಂಗಳಾದೇವಿಯ ಶಯನಕ್ಕೆ 60ಸಾವಿರ ಚೆಂಡು ಮಲ್ಲಿಗೆ ಸಮರ್ಪಣೆ

Published on

ಮಂಗಳೂರು: ಕರೊನಾ ಭೀತಿಯ ನಡುವೆಯೂ ಈ ಬಾರಿ ಮಹತೋಭಾರ ಶ್ರೀಮಂಗಳಾದೇವಿಯ ಶಯನೋತ್ಸವಕ್ಕೆ ಭಕ್ತರಿಂದ ಸುಮಾರು 60 ಸಾವಿರಕ್ಕೂ ಅಧಿಕ ಚೆಂಡು ಮಲ್ಲಿಗೆ ಸಪರ್ಮಣೆಯಾಗಿದೆ.
ಶನಿವಾರ ರಾತ್ರಿ ವರೆಗೂ ರಥ ಸವಾರಿ, ಉತ್ಸವಾದಿಗಳಿಂದ ಸಂತುಷ್ಟಳಾಗಿ ಮೆರೆದು, ದಣಿದು ಬಂದು ಗರ್ಭಗೃಹವನ್ನು ಸೇರಿದ ದೇವಿ ಮಹಾಪೂಜೆ ಸ್ವೀಕರಿಸಿ, ಶ್ರೀ ಭೂತ ಬಲಿಯ ಬಳಿಕ ಶಯನೋತ್ಸವಕ್ಕೆ ಸಿದ್ಧಳಾದಳು. ದೇವಸ್ಥಾನದ ವಾರ್ಷಿಕ ಜಾತ್ರೆಯ ಅವಭೃತೋತ್ಸವದ ಪೂರ್ವಭಾವಿಯಾಗಿ ಶ್ರೀ ದೇವಿಯ ಶಯನೋತ್ಸವ ನೆರವೇರುತ್ತದೆ. ಅದರಂತೆ ಶನಿವಾರ ಸಾಯಂಕಾಲ 4 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೂ ದೇವಳದ ಒಳ ಪ್ರಾಂಗಣಗಳಲ್ಲಿ ಭಕ್ತರಿಂದ ಸೇವಾರೂಪದಲ್ಲಿ ಮಲ್ಲಿಗೆ ಚೆಂಡಿನ ಅಟ್ಟಿಗಳನ್ನು ಸ್ವೀಕರಿಸಲಾಗಿತ್ತು. ಹೀಗಾಗಿ ಸಂಪೂರ್ಣ ದೇವಸ್ಥಾನದಲ್ಲಿ ಮಲ್ಲಿಗೆಯ ಪರಿಮಳವೇ ಮನ ತಣಿಸುವಂತಿತ್ತು. ದೇವಳದ ಗರ್ಭಗೃಹ, ಮುಖಮಂಟಪ, ರಂಗ ಮಂಟಪ, ದ್ವಾರಪಾಲಿಕೆಯರ ಮೂರ್ತಿ, ಸಿಂಹರಾಜನ ವಿಗ್ರಹಗಳಿಗೂ ಶಯನದ ಮಲ್ಲಿಗೆಯ ಅಲಂಕಾರ ನಡೆಸಲಾಗಿತ್ತು.

ಭಕ್ತರಿಂದ ಊರ ಮಲ್ಲಿಗೆಯ ಜತೆಗೆ, ಅಬ್ಬಲಿಗೆ, ಹಿಂಗಾರ, ಸಂಪಿಗೆ ಮೊದಲಾದ ಸುವಾಸನಾಯುಕ್ತ ಪುಷ್ಪಗಳು ಸಮರ್ಪಿಸಲ್ಪಟ್ಟಿತು. ರಾತ್ರಿ 1 ಗಂಟೆಯಿಂದ ಶಯನೋತ್ಸವ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿತು. ಶ್ರೀ ದೇವಿಯ ಮೂಲ ಬಿಂಬ, ಉತ್ಸವ ಮೂರ್ತಿ ಪುಷ್ಪ ಕನ್ನಡಿಯ ಸಹಿತ ಗರ್ಭಗೃಹದಲ್ಲಿ ಪಾಣಿ ಪೀಠದಿಂದ ಆರಂಭಗೊಂಂಡು ಸಂಪೂರ್ಣ ತಾಯಿಯ ಬಿಂಬವನ್ನು ಮಲ್ಲಿಗೆ ಹೂವುಗಳಿಂದ ಅಲಂಕರಿಸಲಾಯಿತು. ಮೂಲ ಬಿಂಬಕ್ಕೆ ಕಿರೀಟ ,ಸ್ವರ್ಣ ದೃಷ್ಟಿ ನೇತ್ರ ತೊಡಿಸಿ, ಅವಲಕ್ಕಿ ಸರ, ವಜ್ರಕಂಠೀ ಹಾರ, ಸರ್ವಾಭರಣಾದಿಗಳಿಂದ ಅಲಂಕೃತಳಾಗಿ ಕೆಂಪು ವರ್ಣದ ಪುಷ್ಪಮಾಲೆ ಧರಿಸಿ ರಾರಾಜಿಸಿದಳು ಶ್ರೀ ಮಂಗಳಾದೇವಿ.
ಧೂಪ ದೀಪಗಳ, ಪುಷ್ಪಾಲಂಕಾರ ಸುವಾಸನೆಯ ಸೊಬಗಿನೊಂದಿಗೆ ಹರಿವಾಣಗಳಲ್ಲಿ ಹಣ್ಣು, ನೈವೇದ್ಯ ಫಲಪುಷ್ಪಗಳನ್ನು ಮೊಳಕೆಯೊಡೆದ ಅಂಕುರಗಳನ್ನು ದೇವಿಯ ಪದತಲದಲ್ಲಿಟ್ಟು ಸಂಪೂರ್ಣ ಶಯನಾಲಂಕಾರವನ್ನು ಶ್ವೇತ ವರ್ಣದ ವಸ್ತ್ರದಿಂದ ತಾಯಿಗೆ ಹೊದಿಸಿ ಬಿಡುವುದರ ಮೂಲಕ ಕವಾಟ ಬಂಧನ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net