ಸಂಪೂರ್ಣ ಉಚಿತ ಶಿಕ್ಷಣಕ್ಕೆ 60 ವಿದ್ಯಾರ್ಥಿಗಳು ಆಯ್ಕೆ

mbl madri
ಮುದ್ದೇಬಿಹಾಳ ಉಚಿತ ಶಿಕ್ಷಣಕ್ಕೆ ಆಯ್ಕೆಯಾದ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಎಂ.ಎನ್. ಮದರಿ ಅವರು ಸನ್ಮಾನಿಸಿದರು. ಬಿ.ಜಿ. ಬಿರಾದಾರ, ಬಸವರಾಜ ಬಿಜ್ಜೂರ, ಎಚ್.ಬಿ. ಜಾಯವಾಡಗಿ, ಗೀತಾ ಹುರಕಡ್ಲಿ ಇತರರಿದ್ದರು.
Published on

ಮುದ್ದೇಬಿಹಾಳ: ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮುದ್ದೇಬಿಹಾಳ ನಗರ, ಕೋಳೂರು-ಯರಗಲ್ಲ, ಅಡವಿ ಹುಲಗಬಾಳ ಗ್ರಾಮಗಳಲ್ಲಿರುವ ಅಭ್ಯುದಯ ಇಂಟರ್‌ನ್ಯಾಶನಲ್ ಕನ್ನಡ, ಇಂಗ್ಲಿಷ್ ಮೀಡಿಯಂ ಸ್ಕೂಲ್‌ಗಳ 6 ಮತ್ತು 8ನೇ ತರಗತಿಗೆ ತಲಾ ವಿಭಾಗಕ್ಕೆ 10ರಂತೆ ಒಟ್ಟು 60 ವಿದ್ಯಾರ್ಥಿಗಳನ್ನು ಊಟ, ವಸತಿ ಸಹಿತ ಸಂಪೂರ್ಣ ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್. ಮದರಿ ಹೇಳಿದರು.

ಇಲ್ಲಿನ ಅಭ್ಯುದಯ ಸೈನ್ಸ್ ಪಿಯು ಕಾಲೇಜು ಆವರಣದಲ್ಲಿ ಭಾನುವಾರ 5, 7ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಹಿಲ್ಯಾದೇವಿ ಹೋಳ್ಕರ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಸಾಧಕ ವಿದ್ಯಾರ್ಥಿಗಳ ಸನ್ಮಾನಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

6ನೇ ತರಗತಿಯ ಕನ್ನಡ, ಇಂಗ್ಲಿಷ್ ವಿಭಾಗಕ್ಕೆ ಪ್ರವೇಶ ಅಪೇಕ್ಷಿಸಿ ಮುದ್ದೇಬಿಹಾಳದಲ್ಲಿರುವ ಅಭ್ಯುದಯ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ 316, ಕೋಳೂರ-ಯರಗಲ್ಲ ಸ್ಕೂಲ್‌ಗೆ 89, ಅಡವಿ ಹುಲಗಬಾಳ ಸ್ಕೂಲ್‌ಗೆ 53 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 8ನೇ ತರಗತಿಯ ಕನ್ನಡ, ಇಂಗ್ಲಿಷ್ ಮೀಡಿಯಂ ವಿಭಾಗಕ್ಕೆ ಸ್ಪರ್ಧೆ ಕೋರಿ ಮುದ್ದೇಬಿಹಾಳ ಶಾಲೆಗೆ 330, ಕೋಳೂರು-ಯರಗಲ್ಲ ಶಾಲೆಗೆ 80, ಅಡವಿಹುಲಗಬಾಳ ಶಾಲೆಗೆ 73 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ಹೆಚ್ಚಿನ ಅಂಕಗಳಿಸಿ ಮೊದಲ 10 ಸ್ಥಾನ ಪಡೆದವರನ್ನು ಸಂಪೂರ್ಣ ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲಾಯಿತು. ಪರೀಕ್ಷೆಗೆ ಹಾಜರಾದ ಎಲ್ಲರಿಗೂ ಶೇ.20 ಶುಲ್ಕ ರಿಯಾಯಿತಿಯೊಂದಿಗೆ ಪ್ರವೇಶಾವಕಾಶ ಒದಗಿಸಲಾಗುತ್ತದೆ ಎಂದರು.

ಅಡವಿಹುಲಗಬಾಳ, ಕೋಳೂರು-ಯರಗಲ್ಲ ಶಾಲೆಗಳಿಗೆ ಉಚಿತ ಶಿಕ್ಷಣಕ್ಕೆ ಆಯ್ಕೆಯಾದವರು ಹಾಸ್ಟೇಲ್ ಸೌಲಭ್ಯ ಬೇಕಾದಲ್ಲಿ ಅವರಿಗೆ ಮುದ್ದೇಬಿಹಾಳದಲ್ಲಿರುವ ಹಾಸ್ಟೇಲ್‌ನಲ್ಲಿ ಅವಕಾಶ ಕಲ್ಪಿಸಲಾಗುತ್ತಿದ್ದು ಇವರನ್ನು ಆಯಾ ಶಾಲೆಗಳಿಗೆ ಕರೆದೊಯ್ಯಲು, ಕರೆತರಲು ನಮ್ಮ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಸೌಲಭ್ಯ ಒದಗಿಸಲಾಗುತ್ತದೆ. 5ನೇ ತರಗತಿವರಿಗೆ 6 ಮತ್ತು 7ನೇ ತರಗತಿಯವರೆಗೆ ಹಾಗೂ 7ನೇ ತರಗತಿಯವರಿಗೆ 8 ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಸಂಸ್ಥೆ ಆಡಳಿತಾಧಿಕಾರಿ ಬಿ.ಜಿ. ಬಿರಾದಾರ ಮಾತನಾಡಿದರು.

ಸಂಸ್ಥೆ ನಿರ್ದೇಶಕ ಕಿರಣ್ ಮದರಿ, ರವಿ ಜಗಲಿ, ಮುಖ್ಯಾಧ್ಯಾಪಕ ಎಚ್.ಬಿ. ಜಾಯವಾಡಗಿ, ಬಿ.ಕೆ. ಪೂಜಾರಿ, ರಮೇಶ ಹರನಾಳ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ, ಗೀತಾ ಹುರಕಡ್ಲಿ, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದವರಿಗಾಗಿ ಏಪ್ರೀಲ್ 10 ರಂದು ಅಭ್ಯುದಯ ಸೈನ್ಸ್ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಉಚಿತ ಶಿಕ್ಷಣ ಯೋಜನೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗುತ್ತದೆ. ಬೇಸಿಗೆ ರಜೆಯಲ್ಲಿ ಮುದ್ದೇಬಿಹಾಳ, ಕೋಳೂರು-ಯರಗಲ್ಲ, ಅಡವಿಹುಲಗಬಾಳ ಶಾಲೆಗಳಲ್ಲಿ ತರಬೇತಿ ಶಿಬಿರ ಏರ್ಪಡಿಸಿದ್ದು ಯಾವುದೇ ಶಾಲೆಯ ವಿದ್ಯಾರ್ಥಿ ಶಿಬಿರದಲ್ಲಿ ಭಾಗವಹಿಸಲು ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗಿದೆ.

-ಎಂ.ಎನ್. ಮದರಿ, ಸಂಸ್ಥಾಪಕ ಕಾರ್ಯದರ್ಶಿ, ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ, ಮುದ್ದೇಬಿಹಾಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net