ಕಳವಾದ ವಾಹನಗಳ ಪತ್ತೆಗೆ 60 ದಿನ ಗಡುವು

Vehicles_Seized_by_SJ_Park_PS 29 APR 20
Published on

ಬೆಂಗಳೂರು: ವಾಹನ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕುವ ಸಲುವಾಗಿ ಆಯುಕ್ತ ಕಮಲ್ ಪಂತ್, ವಾಹನ ಕಳ್ಳರನ್ನು 60 ದಿನಗಳ ಒಳಗಾಗಿ ಪತ್ತೆಹಚ್ಚುವಂತೆ ಪೊಲೀಸರಿಗೆ ಗಡುವು ನೀಡಿದ್ದಾರೆ. ನಗರದಲ್ಲಿ ವಾಹನಗಳ ಕಳ್ಳತನ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃತ್ಯ ನಡೆದ 60 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡುವಂತೆ ಎಲ್ಲ ಡಿಸಿಪಿಗಳಿಗೆ ಆಯುಕ್ತ ಕಮಲ್ ಪಂತ್ ಬುಧವಾರ ಟ್ವಿಟ್ ಮಾಡಿದ್ದಾರೆ.

ನಿಗದಿತ ಅವಧಿಯಲ್ಲಿ ಆರೋಪಿಗಳು ಪತ್ತೆಯಾಗದೆ ಇದ್ದರೆ ವಾಹನಗಳ ಮಾಲೀಕರಿಗೆ 75 ದಿನಗಳಲ್ಲಿ ವಾಹನ ವಿಮೆ ಹಣ ಪಡೆಯಲು ಒಪ್ಪಿಗೆ ಪತ್ರ ನೀಡುವಂತೆ ಸೂಚನೆ ನೀಡಿದ್ದಾರೆ.

ವಾಹನ ಕಳವು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇವುಗಳ ಕಡಿವಾಣ ಹಾಕಲು ಸ್ಥಳೀಯ ಪೊಲೀಸರು ಕೈಚೆಲ್ಲಿದ್ದರು. ವಾಹನ ಮಾಲೀಕರಿಂದ ದೂರು ಪಡೆದು ಅವರಿಗೆ ಎಫ್​ಐಆರ್ ದಾಖಲಿಸಲು ಸಹ ಹಿಂದೇಟು ಹಾಕುತ್ತಿದ್ದರು. ಎಫ್​ಐಆರ್ ಮಾಡಿದರೂ ವರ್ಷಾನುಗಟ್ಟಲೇ ವಾಹನ ಪತ್ತೆ ಮಾಡದೆ ಸುಮ್ಮನಿರುತ್ತಿದ್ದರು. ತನಿಖೆ ನೆಪದಲ್ಲಿ ಮಾಲೀಕರಿಗೆ ವಾಹನ ವಿಮೆ ಹಣ ಪಡೆಯಲೂ ಒಪ್ಪಿಗೆ ಪತ್ರ ನೀಡುತ್ತಿರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಸಮಯ ನಿಗದಿ ಪಡಿಸಿ ಪೊಲೀಸರಿಗೆ ವಾಹನ ಕಳ್ಳತನ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಮಾಡುವಂತೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net