ಶೇ. 60ರಷ್ಟು ಕಮಿಷನ್ ಸರ್ಕಾರ

mahesh T
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ ವ್ಯಾಪಕವಾಗಿದ್ದು, ಪ್ರತಿ ಟೆಂಡರ್​ನಲ್ಲೂ ಕಮಿಷನ್ ದಂಧೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಶೇ. 60ರಷ್ಟು ಕಮಿಷನ್ ಸರ್ಕಾರವಾಗಿದೆ. ಇದುವೇ ರಾಜ್ಯ ಸರ್ಕಾರದ 2 ವರ್ಷಗಳ ಸಾಧನೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಅವಳಿ ನಗರದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ಎಲ್​ಇಡಿ ಬೀದಿ ದೀಪ ಅಳವಡಿಕೆ ಟೆಂಡರ್​ಗೆ ಅನುಮೋದನೆ ನೀಡಲಾಗಿದೆ. ಟೆಂಡರ್​ಗೆ ಅನುಮೋದನೆ ಪಡೆದವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಆಗಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ಆರಂಭಕ್ಕೆ ಕಾರ್ಯಾದೇಶ ನೀಡಿಲ್ಲ. ಸಚಿವರನ್ನು ಯಾವ ಕಾರಣಕ್ಕೆ ಭೇಟಿ ಮಾಡಬೇಕಾಗಿದೆ ಎಂಬುದನ್ನು ತಾವೇ ಯೋಚನೆ ಮಾಡಿ ಎಂದರು.

ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ (ಎಂಜಿಎನ್​ವೈ)ಯ ಕಾಮಗಾರಿಗಳಿಗೆ ಟೆಂಡರ್ ಕರೆಯುವ ಅಧಿಕಾರ ಮೊದಲು ಹು-ಧಾ ಮಹಾನಗರ ಪಾಲಿಕೆಗೆ ಇತ್ತು. ಇದೀಗ 2ನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಕರೆಯುವ ಅಧಿಕಾರ ಪೌರಾಡಳಿತ ನಿರ್ದೇಶನಾಲಯಕ್ಕೆ ವಹಿಸಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಹೈಕಮಾಂಡ್​ಗೆ ಕರ್ನಾಟಕವನ್ನು ಎಟಿಎಂ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ಹಗರಣ, ವಿದ್ಯಾರ್ಥಿನಿ ಅಂಜಲಿ ಹಿರೇಮಠ ಪ್ರಕರಣದಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸದಿರುವುದು, ಡಿಜೆ ಹಳ್ಳಿ, ಕೆಜಿ ಹಳ್ಳ ಪ್ರಕರಣದ ಆರೋಪಿಗಳನ್ನು ಖುಲಾಸೆ ಮಾಡಿದ್ದು, ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಯಾವ ನೈತಿಕತೆ ಇಟ್ಟುಕೊಂಡು ಇವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ ? ಇದೊಂದು ಅತೀ ಭ್ರಷ್ಟ ಸರ್ಕಾರ ಎಂದು ಜರಿದರು.

ರಾಜ್ಯದಲ್ಲಿ ಬಡವರ ಅನುಕೂಲಕ್ಕಾಗಿ 14012 ಜನೆರಿಕ್ ಜನೌಷಧಿ ಕೇಂದ್ರಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ 220 ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ಇದರಿಂದ ಸರ್ಕಾರ ಮೆಡಿಕಲ್ ಲಾಬಿಗೆ ಮಣಿದಂತೆ ಕಾಣುತ್ತಿದೆ. ಇದೊಂದು ಬಡವರ ವಿರೋಧ ಸರ್ಕಾರ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ನಿಂಗಪ್ಪ ಸುತಗಟ್ಟಿ, ಬಸವರಾಜ ಕುಂದಗೋಳಮಠ, ಈರಣ್ಣ ಜಡಿ, ಮಾಲತೇಶ ಶ್ಯಾಗೋಟಿ, ಗುರು ಪಾಟೀಲ, ವೆಂಕಟೇಶ ಮೇಸ್ತ್ರಿ, ರವಿ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net