ನರೇಗಾ ಯೋಜನೆಯಡಿ 60.65 ಲಕ್ಷ ರೂ. ಕಾಮಗಾರಿ

12 yelandur 01
Published on

ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ 6 ತಿಂಗಳಲ್ಲಿ 60.65 ಲಕ್ಷ ರೂ. ವೆಚ್ಚದ ಕಾಮಗಾರಿಗಳು ನಡೆದಿವೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾಜಿಕ ಲೆಕ್ಕ ತಪಾಸಣಾ ಹಾಗೂ ಮಹಿಳಾ ಗ್ರಾಮ ಸಭೆಯಲ್ಲಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಲುವೆ ಅಭಿವೃದ್ಧಿ, ಕೊಟ್ಟಿಗೆ ನಿರ್ಮಾಣ, ಒಕ್ಕಣೆ ಕಣ, ಗಿಡ ನೆಡುವುದು, ಸೇರಿದಂತೆ ಜಮೀನುಗಳ ಅಭಿವೃದ್ಧಿಗೂ ಇದರಲ್ಲಿ ಅವಕಾಶವಿದೆ. ಹಾಗಾಗಿ ಪ್ರತಿಯೊಬ್ಬರೂ ಇದರ ಲಾಭ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಂತರ ಸಾಮಾಜಿಕ ಲೆಕ್ಕೆ ಪರಿಶೋಧನಾ ತಾಲೂಕು ಸಂಯೋಜಕ ರಾಜ್‌ಕುಮಾರ್ ಮಾತನಾಡಿ, ಗ್ರಾಮದಲ್ಲಿ ಒಟ್ಟು 123 ಕಾಮಗಾರಿಗಳು ನಡೆದಿವೆ. ಇದರಲ್ಲಿ 83 ವೈಯಕ್ತಿಕ ಹಾಗೂ 40 ಸಮುದಾಯ ಕಾಮಗಾರಿಗಳು ನಡೆದಿವೆ. ಒಟ್ಟು ಕೂಲಿ ವೆಚ್ಚ 15.38 ಲಕ್ಷ ರೂ. ಹಾಗೂ ಸಾಮಗ್ರಿಗಳಿಗೆ 45.27 ಲಕ್ಷ ರೂ. ಪಾವತಿಸಲಾಗಿದೆ. ಒಟ್ಟು 18,200 ಮಾನವ ದಿನಗಳು ಸೃಜನೆಯಾಗಿದೆ. ಇದರಿಂದ 389 ಕುಟುಂಬಗಳಿಗೆ ಲಾಭವಾಗಿದೆ. ಇದರಲ್ಲಿ ಗ್ರಾಪಂ ಕಚೇರಿ, ತೋಟಗಾರಿಕೆ, ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆದಿವೆ ಎಂದು ತಿಳಿಸಿದರು.

ಸಭೆಯಲ್ಲಿ ನೋಡಲ್ ಅಧಿಕಾರಿ ಹರೀಶ್‌ಕುಮಾರ್, ಗ್ರಾ.ಪಂ.ಅಧ್ಯಕ್ಷೆ ದಾಕ್ಷಾಯಿಣಿ, ಉಪಾಧ್ಯಕ್ಷ ಸಿದ್ದರಾಜು, ಸದಸ್ಯರಾದ ನಾಗರಾಜು, ನಂಜುಂಡಸ್ವಾಮಿ, ಆರ್.ಮಂಜುನಾಥ್, ವೈ.ಸಿ.ಮಹೇಶ್, ಉಷಾ ರಂಗಸ್ವಾಮಿ ಪಿಡಿಒ ವೆಂಕಟಚಲಮೂರ್ತಿ, ಸಿಬ್ಬಂದಿ ರವಿ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net