6 ತಿಂಗಳಲ್ಲಿ ಲಕ್ಷ ಕರೊನಾ ಟೆಸ್ಟ್

brims vyrolgy
Published on

ಸ.ದಾ. ಜೋಶಿ ಬೀದರ್

ಇಲ್ಲಿನ ಬ್ರಿಮ್ಸ್ ನಲ್ಲಿ ಹೊಸದಾಗಿ ಸ್ಥಾಪಿಸಿರುವ ಮಾಲಿಕ್ಯೂಲರ್ ವೈರಾಲೋಜಿ ಲ್ಯಾಬ್ (ಸೂಕ್ಷ್ಮಾಣು ರೋಗ ಪತ್ತೆ ಪ್ರಯೋಗಾಲಯ)ದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಕರೊನಾ ಪರೀಕ್ಷೆ ಮಾಡಿದ ಸಂಖ್ಯೆ 1 ಲಕ್ಷ ಗಡಿ ದಾಟಿರುವುದು ದಾಖಲೆ ಎನಿಸಿದೆ.

ಕರೊನಾ ಸೋಂಕು ನಿಯಂತ್ರಣದಲ್ಲಿ ಟೆಸ್ಟ್ ವರದಿ ತ್ವರಿತ ಬರುವುದು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಬೇಗ ಪತ್ತೆ ಹಚ್ಚುವುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ಜುಲೈ, ಆಗಸ್ಟ್, ಸೆಪ್ಟೆಂಬರ್ ನಲ್ಲಿ ಜಿಲ್ಲಾದ್ಯಂತ ತಲ್ಲಣ ಸೃಷ್ಟಿಸಿದ್ದ ಮಹಾಮಾರಿಯು ಸದ್ಯ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ರಾಜ್ಯದಲ್ಲೇ ಅತಿ ಕಮ್ಮಿ ಸಕ್ರಿಯ ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಕರೊನಾಗೆ ಕಟ್ಟಿ ಹಾಕಲು ಪೂರಕವಾಗಿ ತ್ವರಿತ ಪರೀಕ್ಷಾ ವರದಿ ನೀಡುವ ಕೆಲಸದಲ್ಲಿ ತೊಡಗಿರುವ ಬ್ರಿಮ್ಸ್ ಲ್ಯಾಬ್ ಸೇವೆ ಶ್ಲಾಘನೀಯ ಎನಿಸಿದೆ.

150 ಕೋಟಿ ರೂ. ವೆಚ್ಚದ ಬ್ರಿಮ್ಸ್ ಹೊಸ ಆಸ್ಪತ್ರೆಯಲ್ಲಿ ವೈರಾಣು ಪತ್ತೆ ಲ್ಯಾಬ್ ಇರಲಿಲ್ಲ. ಮಾರ್ಚ್ ಕೊನೇ ವಾರದಲ್ಲಿ ಕರೊನಾ ಸಂಕಷ್ಟ ಎದುರಾಗುತ್ತಲೇ ಲ್ಯಾಬ್ ಸ್ಥಾಪನೆ ವಿಷಯ ಚರ್ಚೆಗೆ ಬಂತು. ರಾಜ್ಯ ಪ್ರಕೃತಿ ವಿಕೋಪ ನಿಯಂತ್ರಣ ನಿಧಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಜೂನ್ 6ರಂದು ಇಲ್ಲಿ ಲ್ಯಾಬ್ ಶುರುವಾಗಿ ಕರೊನಾ ಟೆಸ್ಟಿಂಗ್ ಆರಂಭಿಸಲಾಯಿತು. ಬ್ರಿಮ್ಸ್ ಸೂಕ್ಷ್ಮಜೀವ ವಿಜ್ಞಾನ (ಮೈಕ್ರೋಬಯಾಲಾಜಿ) ವಿಭಾಗದ ಅಧೀನ ಲ್ಯಾಬ್ ನಡೆಯುತ್ತಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಮಾನ್ಯತೆ ನೀಡಿದೆ. ಲ್ಯಾಬ್ ಸ್ಥಾಪನೆಯಾದ 6 ತಿಂಗಳಲ್ಲೇ (ಡಿ.2ರವರೆಗೆ) ಇಲ್ಲಿ 1.02 ಲಕ್ಷ ಕರೊನಾ ಪರೀಕ್ಷೆ ನಡೆಸಲಾಗಿದೆ.

ಮೈಕ್ರೋಬಯಾಲಾಜಿ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ ಡಾ.ಸುಧೀಂದ್ರ ಕುಲಕರ್ಣಿ ಅವರು ಈ ಲ್ಯಾಬ್ ಪ್ರಧಾನ ಪರೀಕ್ಷಕರಾಗಿ (ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್) ಹೆಚ್ಚುವರಿ ಹೊಣೆ ನಿಭಾಯಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ 12 ತಂತ್ರಜ್ಞರು ಸೇರಿ 20 ಸಿಬ್ಬಂದಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದು, ಕಡಿಮೆ ಸಮಯದಲ್ಲಿ 1.02 ಲಕ್ಷ ಟೆಸ್ಟ್ ನಡೆಸಿ ಸಾಧನೆ ಮೆರೆದಿದೆ. ದಿನದ 24 ಗಂಟೆ ಇಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಮುಂಚೆ ನಿತ್ಯ ನಿತ್ಯ ಸರಾಸರಿ 500-600 ಟೆಸ್ಟ್ ಮಾಡಲಾಗುತ್ತಿತ್ತು. ಇದೀಗ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಟೆಸ್ಟ್ ಕಡ್ಡಾಯ ಮಾಡಿದ್ದರಿಂದ ಈ ಪ್ರಮಾಣ ಸರಾಸರಿ 1600-1800ಕ್ಕೇರಿದೆ. ಇತ್ತೀಚೆಗೆ ಒಂದೇ ದಿನದಲ್ಲಿ ದಾಖಲೆಯ 2080 ಟೆಸ್ಟ್ ನಡೆಸಲಾಗಿದೆ. ಇಷ್ಟಾದರೂ ಪಾಸಿಟಿವ್ ಬರುತ್ತಿರುವ ಪ್ರಮಾಣ ಶೇ. 0.50 ರಷ್ಟು ಸಹ ಇಲ್ಲ ಎಂದು ಬ್ರಿಮ್ಸ್ ಮೂಲಗಳು ವಿಜಯವಾಣಿಗೆ ಮಾಹಿತಿ ನೀಡಿವೆ.

ಎರಡನೇ ಅಲೆಯ ಎಚ್ಚರವಿರಲಿ
ಬರುವ ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ಕರೊನಾ ಎರಡನೇ ಅಲೆ ವಕ್ಕರಿಸಬಹುದು ಎಂದು ತಜ್ಞ ವೈದ್ಯರು, ಪರಿಣತರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಈ ಮಹಾಮಾರಿ ಬಗ್ಗೆ ಎಲ್ಲರೂ ಮುನ್ನೆಚ್ಚರಿಕೆ ವಹಿಸುವುದು, ಸರ್ಕಾರದ ಕೋವಿಡ್ ಮಾರ್ಗಸೂಚಿ ಕಡ್ಡಾಯ ಬಳಸುವುದು ಅಗತ್ಯವೆನಿಸಿದೆ. ನಮ್ಮಲ್ಲಿ ಕರೊನಾ ಕಮ್ಮಿ ಆಗಿದೆ ಎಂದು ಮೈಮರೆತರೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇತ್ತೀಚೆಗೆ ಜಿಲ್ಲೆಯಲ್ಲಿ ಬಹಳ ಜನ ಕರೊನಾ ಮುಂಜಾಗ್ರತೆ ಕ್ರಮಗಳನ್ನು ಪಾಲಿಸುತ್ತಿಲ್ಲ. ಸಕ್ರಿಯ ಕೇಸ್ ಎರಡಂಕಿಗೆ ಬಂದಿದೆ. ನಿತ್ಯದ ಪಾಸಿಟಿವ್ ಸಂಖ್ಯೆ ಒಂದಂಕಿಗೆ ಇಳಿದಿರುವುದು ಖುಷಿ ಸಂಗತಿ. ಆದರೆ ಜನರು ಕೋವಿಡ್ ನಿಯಮ ಪಾಲನೆಯಿಂದ ದೂರ ಸರಿದಿರುವುದು ತಳಮಳ ಮೂಡಿಸುತ್ತಿದೆ. ಶೇ.75ರಷ್ಟು ಜನ ಇದೀಗ ಮಾಸ್ಕ್ಗೆ ವಿದಾಯ ಹೇಳಿದ್ದಾರೆ. ಅಂಗಡಿ, ಹೋಟೆಲ್, ಶಾಪಿಂಗ್ ಮಾಲ್, ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಸೇರಿ ಎಲ್ಲೂ ಪರಸ್ಪರ ಅಂತರ ಕಾಪಾಡುತ್ತಿಲ್ಲ. ಮದುವೆ ಸೇರಿ ನಾನಾ ಕಾರ್ಯಕ್ರಮ ಅದ್ದೂರಿ ನಡೆಯುತ್ತಿವೆ. ನೂರಲ್ಲ, ಸಾವಿರಾರು ಜನರು ಬಿಂದಾಸ್ ಸೇರುತ್ತಿದ್ದಾರೆ. ಮಸ್ತ್ ಊಟ ಮಾಡುತ್ತಿದ್ದಾರೆ. ಇವೆಲ್ಲ ಬೆಳವಣಿಗೆ ಮತ್ತೆ ಕರೊನಾ ಅಪಾಯ ಆಹ್ವಾನಿಸಬಹುದಾ ಎಂಬ ಆತಂಕದ ಪ್ರಶ್ನೆಗೆ ಕಾರಣವಾಗಿದೆ.

ಸಕ್ರಿಯ ಪ್ರಕರಣಗಳಲ್ಲಿ
ಬೀದರ್ ನಂಬರ್ ಟು

ಜಿಲ್ಲೆಯಲ್ಲಿ ಡಿ. 1ರವರೆಗೆ ಕೇವಲ 49 ಕರೊನಾ ಸಕ್ರಿಯ ಪ್ರಕರಣಗಳಿವೆ. ಇದು ರಾಜ್ಯದಲ್ಲೇ ನಂಬರ್ ಎರಡನೇ ಸ್ಥಾನವಿದೆ. ಗದಗ ಜಿಲ್ಲೆಯು 44 ಸಕ್ರಿಯ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಬೀದರ್ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ 45 ಪಾಸಿಟಿವ್ ಪ್ರಕರಣಗಳು ಮಾತ್ರ ವರದಿಯಾಗಿವೆ. ಡಿ.1 ರಂದು ಕೇವಲ ಒಂದು ಪ್ರಕರಣ ಬಂದಿದೆ. ಡಿ.1ರವರೆಗಿನ ಅಂಕಿ ಅಂಶಗಳಂತೆ ಜಿಲ್ಲೆಯಲ್ಲಿ ಒಟ್ಟು 7077 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಪೈಕಿ 6856 ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿಗೆ 168 ಮಂದಿ ಸಾವನ್ನಪ್ಪಿದ್ದಾರೆ. ಸದ್ಯದ ಈ ಅಂಕಿಗಳು ಜನರಲ್ಲಿನ ಕರೊನಾತಂಕ ನಿವಾರಿಸಿ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಬರುವುದು ಗಣನೀಯ ಕಮ್ಮಿಯಾಗಿರುವುದು, ಸಕ್ರಿಯ ಪ್ರಕರಣಗಳಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವುದು ಖುಷಿ ಸಂಗತಿ. ಆದರೆ ವೈರಸ್ ಇನ್ನೂ ಹೋಗಿಲ್ಲ. ಎಚ್ಚರ ತಪ್ಪಿದರೆ ಮತ್ತೆ ಸ್ಫೋಟಗೊಳ್ಳುವ ಅಪಾಯವಿದೆ. ಬರುವ ದಿನಗಳಲ್ಲಿ ಸೋಂಕಿನ ಎರಡನೇ ಅಲೆ ಬರಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹೀಗಾಗಿ ಜನರು ಕಡ್ಡಾಯ ಮುನ್ನೆಚ್ಚರಿಕೆ ವಹಿಸಬೇಕು.| ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ

ಜಿಲ್ಲೆಯಲ್ಲಿ ಕರೊನಾ ಪ್ರಕರಣ ಇಳಿಮುಖವಾಗಿರುವುದು ನೆಮ್ಮದಿ ತಂದಿದೆ. ಆರೋಗ್ಯ, ವೈದ್ಯಕೀಯ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಶ್ರಮ ಮತ್ತು ಸಾಮೂಹಿಕ ಪ್ರಯತ್ನ ಇದಕ್ಕೆಲ್ಲ ಮುಖ್ಯ ಕಾರಣ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವಿಕೆ, ಪರಸ್ಪರ ಅಂತರ ಸೇರಿ ಕೋವಿಡ್ ಮಾರ್ಗಸೂಚಿ ಕಡ್ಡಾಯ ಪಾಲಿಸಬೇಕು. ಜಿಲ್ಲೆಯನ್ನು ಕರೊನಾಮುಕ್ತಗೊಳಿಸಲು ಸಹಕರಿಸಬೇಕು.| ರಾಮಚಂದ್ರನ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net