6 ತಿಂಗಳಲ್ಲಿ ಜಿಲ್ಲೆಗೆ 4ಜಿ ಸೇವೆ

27KMT1
Published on

ಕುಮಟಾ: ಜಿಲ್ಲಾದ್ಯಂತ ಮುಂದಿನ 6 ತಿಂಗಳಲ್ಲಿ ಬಿಎಸ್​ಎನ್​ಎಲ್ 3ಜಿ ಸೇವೆ ಇರುವ ಎಲ್ಲಾ ಕಡೆಗಳಲ್ಲಿ 4ಜಿ ಸೇವೆ ಲಭ್ಯವಾಗಲಿದೆ ಎಂದು ಬಿಎಸ್​ಎನ್​ಎಲ್ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ರಾಜಕುಮಾರ ತಿಳಿಸಿದರು.

ಅವರು ಪಟ್ಟಣದ ಮೂರೂರು ಕ್ರಾಸ್ ಬಳಿಯ ಬಿಎಸ್​ಎನ್​ಎಲ್ ಕಚೇರಿಯಲ್ಲಿ ಸೋಮವಾರ ಬಿಎಸ್​ಎನ್​ಎಲ್ ಸೇವಾ ಕೇಂದ್ರ(ಬೆಣ್ಣೆ ಫ್ರಾಂಚೈಸಿ)ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ತಿಂಗಳಿಗೆ 4-5 ಟಾವರ್​ಗಳ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ 3-4 ತಿಂಗಳಲ್ಲಿ ನಮ್ಮ ಸಂಸ್ಥೆಯಿಂದ 4ಜಿ ಟೆಂಡರ್ ನಡೆದು ಜೂನ್ ಹೊತ್ತಿಗೆ 4ಜಿ ಸೇವೆ ಆರಂಭಗೊಳ್ಳುವ ನಿರೀಕ್ಷೆ ಇದೆ. 4ಜಿ ಸೇವೆ ಹೆಚ್ಚು ಜನರನ್ನು ತಲುಪುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಮ್ಮ ತಂಡವು ಫ್ರಾಂಚೈಸಿಗಳ ಸಹಾಯದೊಂದಿಗೆ 4ಜಿ ಸೇವೆಯನ್ನು ಸ್ಪರ್ಧಾತ್ಮಕ ಗುಣಮಟ್ಟದಲ್ಲಿ ನೀಡುವ ಸಿದ್ಧತೆ ನಡೆಸಿದ್ದೇವೆ ಎಂದರು.

ಬಿಎಸ್​ಎನ್​ಎಲ್ ಗ್ರಾಹಕರಿಗೆ ಕಡಿಮೆ ದರದಲ್ಲಿ ಪಾರದರ್ಶಕ ಸೇವೆ ನೀಡಲು ಬದ್ಧವಾಗಿದೆ. ಬಿಎಸ್​ಎನ್​ಎಲ್ ಹಾಗೂ ಫ್ರಾಂಚೈಸಿ ಶಾಖೆಗಳ ಹೊಸ ಪ್ರಯತ್ನಗಳ ಲಾಭ ಜಿಲ್ಲೆಯ ಜನತೆಗೆ ಸಿಗಬೇಕು. ದೂರಸಂಪರ್ಕ ವ್ಯವಸ್ಥೆ ಕ್ಷೇತ್ರದ ಎಲ್ಲ ಮೂಲೆಗಳನ್ನು ತಲುಪಬೇಕು. ಮಾರುಕಟ್ಟೆ ಹೆಚ್ಚಿಸುವುದು, ನಮ್ಮ ಪ್ರಾಂಚೈಸಿಗಳು ಹೆಚ್ಚು ಆಸಕ್ತಿ ಹಾಗೂ ವೃತ್ತಿಪರವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೇ ಭಟ್ಕಳದಲ್ಲಿ ಆರಂಭವಾಗಿದ್ದು, ಇಂದು ಕುಮಟಾ ಹಾಗೂ ಗೋಕರ್ಣದಲ್ಲಿ ಸೇವಾ ಕೇಂದ್ರ ಆರಂಭಿಸುತ್ತಿದ್ದೇವೆ ಎಂದರು.

ಈ ವೇಳೆ ವಿಭಾಗೀಯ ಇಂಜಿನಿಯರ್ ಎಂ.ಎಲ್. ಮೊಗೇರ, ಸಹಾಯಕ ಅಧಿಕಾರಿ ಜಿ.ಜಿ. ಭಟ್, ಎಜಿಎಂ ಜಿ.ಪಿ. ಶಾನಭಾಗ, ಪ್ರಾಂಚೈಸಿ ಮಾಲೀಕ ವಾಸುದೇವ ಹನುಮಂತ ನಾಯಕ ಬೆಣ್ಣೆ , ಬೆಣ್ಣೆ ಕುಟುಂಬದ ನಾಗೇಶ ನಾಯಕ, ಹನುಮಂತ ನಾಯಕ, ಪ್ರಸನ್ನ ನಾಯಕ, ವಿನಾಯಕ ನಾಯಕ, ಕಿರಣ ನಾಯಕ ಹಾಗೂ ಜಯಶ್ರೀ ಕಾಮತ, ಅತುಲ್ ಕಾಮತ ಇನ್ನಿತರರು ಇದ್ದರು.

ಬಿಎಸ್​ಎನ್​ಎಲ್ ಹೊರತುಪಡಿಸಿ ಉಳಿದ ಎಲ್ಲಾ ಮೊಬೈಲ್ ಸೇವಾದಾರರು ದರ ಹೆಚ್ಚಳ ಮಾಡಿದ್ದಾರೆ. ಆದರೆ, ನಾಮ್ಮ ಸಂಸ್ಥೆ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾಗಿ ಸಮಾಜದ ತಳಮಟ್ಟದಿಂದ ಎಲ್ಲ ವರ್ಗದ ಜನರ ಅಗತ್ಯಗಳಿಗೆ ಪೂರಕ ದರದಲ್ಲೇ ಇದೆ. ಜನ ಮೊದಲಿನಿಂದಲೂ ಬಿಎಸ್​ಎನ್​ಎಲ್​ಗೆ ಹತ್ತಿರವಾಗಿದ್ದಾರೆ. ಮಾರುಕಟ್ಟೆಯ ಶೇ. 25ಕ್ಕಿಂತ ಹೆಚ್ಚು ಭಾಗವನ್ನು ಹೊಂದಿದ್ದೇವೆ. | ರಾಜಕುಮಾರ ಬಿಎಸ್​ಎನ್​ಎಲ್ ಜಿಲ್ಲಾ ಪ್ರಧಾನ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net