6 ಜನರ ಜೀವನ ಪ್ರಜ್ವಲಿಸಿದ ಪ್ರಜ್ವಲ್

prajvala- ADVT news photos
Published on

ಮೈಸೂರು: ಮಿದುಳು ನಿಷ್ಕ್ರಿಯಗೊಂಡ 20ರ ಹರೆಯದ ಇ.ಎ.ಪ್ರಜ್ವಲ್ ಅವರ ಅಂಗಾಂಗ ದಾನದಿಂದ 6 ಜನರ ಜೀವನದಲ್ಲಿ ಹೊಸ ಬೆಳಕು ಪ್ರಜ್ವಲಿಸಿದೆ. 2 ಕಿಡ್ನಿ, 1 ಲಿವರ್, ಹೃದಯ ಕವಾಟಗಳು, ಶ್ವಾಸಕೋಶ ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ.


ಮಂಡ್ಯ ಜಿಲ್ಲೆ ಪಾಂಡವಪುರ ಸಕ್ಕರೆ ಕಾರ್ಖಾನೆ ಬಳಿ ರೈಲ್ವೆ ಫ್ಲೈ ಓವರ್ ಸಮೀಪ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರಜ್ವಲ್ ಅವರನ್ನು ಆ. 30ರಂದು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಎಂದಿನಂತೆ ಸಿಟಿ ಸ್ಕ್ಯಾನ್ ಮಾಡಿದಾಗ ಮಿದುಳಿನ ಅಂಗಾಂಶಕ್ಕೆ ಘಾಸಿಯಾಗಿತ್ತು.


ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ನಾಲ್ಕು ದಿನಗಳ ಕಾಲ ಜೀವರಕ್ಷಣೆ ಬೆಂಬಲದಲ್ಲೇ ಇರಿಸಲಾಗಿತ್ತು. 5ನೇ ದಿನ ಅಂದರೆ, ಸೆ.2ರಂದು ರಾತ್ರಿ 1.20ರಲ್ಲಿ ಮಿದುಳಿನ ಅಂಗಾಂಶಕ್ಕೆ ಘಾಸಿಯಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಮಿದುಳು ವೈಫಲ್ಯ (ಬ್ರೈನ್ ಡೆಡ್) ಎಂದು ಘೋಷಿಸಲಾಯಿತು. ಈ ಘೋಷಣೆಯನ್ನು 1994ರ ಮಾನವ ಅಂಗಾಂಗಗಳ ಕಸಿ ಕಾಯ್ದೆ ಅನುಸಾರ ಆಸ್ಪತ್ರೆಯ ಶಿಷ್ಟಾಚಾರದಂತೆ ವೈದ್ಯರ ತಂಡ ಕೈಗೊಂಡಿತು.


ಘಟನೆಗೂ ಮುನ್ನ ಪ್ರಜ್ವಲ್ ಅವರು ಆರೋಗ್ಯವಾಗಿದ್ದರು. ಹೆಚ್ಚಿನ ಪರೀಕ್ಷೆ ನಡೆಸಿದಾಗ ಅವರ ಅಂಗಾಂಗಗಳು ದಾನಕ್ಕೆ ಯೋಗ್ಯವಾಗಿವೆ ಎಂಬುದೂ ತಿಳಿಯಿತು. ನಂತರ ಶಿಷ್ಟಾಚಾರದ ಪ್ರಕಾರ ಅವರ ಕುಟುಂಬದೊಂದಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಅವರು ಪ್ರಜ್ವಲ್ ಅವರ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.


ಅಂಗದಾನದ ಶಿಷ್ಟಾಚಾರದಂತೆ ಜೀವ ಸಾರ್ಥಕತೆ ಸಂಸ್ಥೆಯ ಅಧಿಕಾರಿಗಳ ಅಂಗ ಸ್ವೀಕರಿಸುವವರ ನಿರೀಕ್ಷಣಾ ಪಟ್ಟಿ ಅನುಸಾರ ಅಂಗದಾನ ಪ್ರಕ್ರಿಯೆ ನಡೆಯಿತು.


ಮೈಸೂರು ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಸೆ.2ರಂದು ಬೆಳಗ್ಗೆ 9.30ರಲ್ಲಿ ಅವರ ಅಂಗಾಂಗಗಳನ್ನು ಹೊರತೆಗೆಯಲಾಯಿತು. ನಂತರ ಬೆಳಗ್ಗೆ 7.17ರಲ್ಲಿ ಅಂಗಾಂಗಳ ಕ್ರಾಸ್-ಕ್ಲ್ಯಾಂಪ್ ಮಾಡಲಾಯಿತು. ಲಿವರ್, ಒಂದು ಕಿಡ್ನಿಯನ್ನು ಅಪೋಲೊ ಬಿಜಿಎಸ್ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ, ಒಂದು ಕಿಡ್ನಿಯನ್ನು ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಗೆ, ಕಾರ್ನಿಯಾಗಳನ್ನು ಕೆ.ಆರ್.ಆಸ್ಪತ್ರೆಗೆ, ಹೃದಯ ಕವಾಟಗಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net