ಫೈನಾನ್ಸ್‌ನಲ್ಲಿ ಕಳವು ಮಾಡಿದ್ದವಗೆ 6 ವರ್ಷ ಜೈಲು

Crime Logo
Published on

ಮೈಸೂರು: ನಗರದ ನಿಧಿ ಗೋಲ್ಡ್ ಮಣಿಪಾಲ್ ಫೈನಾನ್ಸ್‌ನಲ್ಲಿ ಕಳವು ಮಾಡಿದ್ದ ಅಪರಾಧಿಗೆ ಮೈಸೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯ 6 ವರ್ಷ ಜೈಲುಶಿಕ್ಷೆ ವಿಧಿಸಿದೆ.

ನಂಜನಗೂಡು ತಾಲೂಕು ತುಂನೇರಳೆ ಗ್ರಾಮದ ಮಹದೇವನಾಯಕ ಅವರ ಪುತ್ರ ನಾಗೇಂದ್ರ ಜೈಲುಶಿಕ್ಷೆಗೆ ಒಳಗಾದ ಆರೋಪಿ.

ಈತ 2013ರ ಜನವರಿ 5ರ ರಾತ್ರಿ ಬನ್ನೂರು ರಸ್ತೆಯ ಟೆರೇಷಿಯನ್ ಕಾಲೇಜು ಎದುರು ಎಸ್‌ಬಿಆರ್ ಕಾಂಪ್ಲೆಕ್ಸ್, 2ನೇ ಮಹಡಿಯಲ್ಲಿರುವ ನಿಧಿ ಗೋಲ್ಡ್ ಮಣಿಪಾಲ್ ಫೈನಾನ್ಸ್ ಒಳಗೆ ಅತಿಕ್ರಮ ಪ್ರವೇಶ ಮಾಡಿದ್ದ. ಜತೆಗೆ ಕಚೇರಿಯ ಕ್ಯಾಷ ಬಾಕ್ಸ್‌ನಲ್ಲಿದ್ದ 151.600 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣ ಹಾಗೂ 2,32,133 ರೂ. ನಗದು ಕಳ್ಳತನ ಮಾಡಿದ್ದ. ಈ ಸಂಬಂಧ ಟೀಚರ್ಸ್‌ ಬಡಾವಣೆಯ ಜೈಗಣೇಶನ್ ಬಿನ್ ಡಿ.ಶ್ರೀನಿವಾಸನ್ ನೀಡಿದ್ದ ದೂರನ್ನು ವಿಚಾರಣೆ ನಡೆಸಿದ ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಂದೇಶ್ ವಿ.ಭಂಡಾರಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಗೇಂದ್ರನಿಗೆ 6 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಸಿ.ಪೂವಯ್ಯ ಅವರು ತನಿಖೆ ಪೂರ್ಣಗೊಳಿಸಿ ಕಲಂ 457, 380 ಐಪಿಸಿ ಅಡಿಯಲ್ಲಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಸಿ.ರಾಜೇಶ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net