

ಬೆಂಗಳೂರು: ದಾಸರಹಳ್ಳಿ ವಲಯದ ಚೊಕ್ಕಸಂದ್ರ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ 6 ಅಂತಸ್ತಿನ ಕಟ್ಟಡ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ದಾಸರಹಳ್ಳಿ ವಲಯದ ಚೊಕ್ಕಸಂದ್ರ ವಾರ್ಡ್‌ನ ರುಕ್ಮಿಣಿನಗರದಲ್ಲಿ ಕಟ್ಟಡ ಮಾಲೀಕ 40/70 ಅಡಿ ವಿಸ್ತೀರ್ಣದ ಸೈಟ್‌ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನೆಲಮಹಡಿ ಸೇರಿ 6 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದರು. ಈ ಸಂಬಂಧ ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರೂ, ಅನಧಿಕೃತ ಕಟ್ಟಡವನ್ನು ತೆರವಿಗೆ ಸ್ಪಂದಿಸಿರಲಿಲ್ಲ. ಹಾಗಾಗಿ ಬುಧವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ 6ನೇ ಮಹಡಿಯಲ್ಲಿ ನಿರ್ಮಿಸಿರುವಂತಹ ಎಸಿಸಿ ಶೀಟ್‌ಪೆಂಟ್ ಹೌಸ್, ಪ್ಯಾರುಟ್ ವಾಲ್ ಅನ್ನು ಸುಮಾರು 20 ಸಿಬ್ಬಂದಿಗಳ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ವಲಯ ಆಯುಕ್ತ ಎಚ್.ಸಿ.ಗಿರೀಶ್ ತಿಳಿಸಿದ್ದಾರೆ.
ಕಟ್ಟಡದ ಅನಧಿಕೃತ ಭಾಗಗಳನ್ನು ಪೊಲೀಸ್ ಸಿಬ್ಬಂದಿ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶ ಉಪ ವಿಭಾಗದ ಅಧಿಕಾರಿ/ಸಿಬ್ಬಂದಿ ಉಪಸ್ಥಿತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರವುಗೊಳಿಸಲು ತಗುಲಿದ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ದಾಸರಹಳ್ಳಿ ವಲಯದ ಮುಖ್ಯ ಅಭಿಯಂತರ ರವಿ, ಕಾರ್ಯಪಾಲಕ ಅಭಿಯಂತರ ಯಧುಕೃಷ್ಣ ಹಾಗೂ ಇತರರು ಉಪಸ್ಥಿತರಿದ್ದರು.