ಅಪಾರ ಪ್ರಮಾಣದ ಚಿನ್ನ ಕದ್ದ ಮನೆ ಕೆಲಸದಾಕೆ ಮೊಬೈಲ್ ಕೇಳಿ ಸೆರೆಸಿಕ್ಕಳು

IMG-20210524-WA0015
Published on

ಬೆಂಗಳೂರು : ಕೆಲಸ ಮಾಡುತ್ತಿದ್ದ ಉದ್ಯಮಿ ಮನೆಯಲ್ಲಿ 1 ಕೆಜಿ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರ ಸೇರಿದಂತೆ ಮೂವರನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಘಡದ ಸುನೈನಾ (25), ಅಸ್ಸಾಂನ ಮೀನಾಜುವುದ್ದೀನ್ (27) ಹಾಗೂ ಬಿಹಾರದ ಚಂದನ್ (19) ಬಂಧಿತರು.

ಯಮಲೂರಿನ ಉದ್ಯಮಿ ನಿತಿನ್ ಅಗರ್‌ವಾಲ್ ಮನೆಯಲ್ಲಿ ಕೆಲಸದಲ್ಲಿದ್ದ ಆರೋಪಿಗಳು, ಮನೆಯ ಮಾಲೀಕರಿಗೆ ಗೊತ್ತಾಗದಂತೆ ಚಿನ್ನಾಭರಣ ಹಾಗೂ ಹಣ ತುಂಬಿದ್ದ ಲಾಕರ್ ಕಳವು ಮಾಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಎಸ್‌ಎಲ್‌ಆರ್ ರೆಡ್ಡಿ ಮತ್ತು ಪಿಎಸ್‌ಐ ಅಶೋಕ್ ಮಾಡ್ಯಾಳ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. 1.05 ಕೆಜಿ ಆಭರಣ, 55 ಸಾವಿರ ರೂ., 1 ಕಾರು, 1 ಬೈಕ್ ಹಾಗೂ 21 ಬೆಳ್ಳಿ ನಾಣ್ಯಗಳು ಸೇರಿ 50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಮಿ ನಿತಿನ್, ಯಮಲೂರು ಸಮೀಪ ವಿಲ್ಲಾದಲ್ಲಿ ನೆಲೆಸಿದ್ದಾರೆ. ಇವರ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸುನೈನಾ ಹಾಗೂ ಸ್ವಚ್ಛತೆಗೆ ಚಂದನ್ ಸೇರಿದಂತೆ 6 ಮಂದಿ ಕೆಲಸಗಾರರು ಇದ್ದಾರೆ. ಎಲ್ಲರಿಗೂ ವಿಲ್ಲಾದ ಆವರಣದಲ್ಲೇ ನಿತಿನ್ ವಸತಿ ಕಲ್ಪಿಸಿದ್ದಾರೆ.

7 ವರ್ಷಗಳಿಂದ ಸುನೈನಾ ಕೆಲಸ ಮಾಡುತ್ತಿದ್ದು, ಮಾಲೀಕರ ಹಣಕಾಸು ಸ್ಥಿತಿಗತಿ ಬಗ್ಗೆ ಮಾಹಿತಿ ಇತ್ತು. ಹಣದಾಸೆಗೆ ಉಂಡ ಮನೆಗೆ ಕನ್ನ ಹಾಕಲು ಸುನೈನಾ ಮತ್ತು ಚಂದನ್ ಸಂಚು ರೂಪಿಸಿದ್ದರು. ಕೆಲ ದಿನಗಳ ಹಿಂದೆ ತಮ್ಮ ಕುಟುಂಬದ ಜತೆ ನಿತಿನ್ ಹೊರ ಹೋಗಿದ್ದರು. ಆಗ ಅವರ ಕೊಠಡಿಯಲ್ಲಿದ್ದ 20 ಕೆಜಿ ತೂಕದ ಲಾಕರ್ ಅನ್ನು ಚಂದನ್ ನೆರವಿನಲ್ಲಿ ಸುನೈನಾ ಕದ್ದು ದ್ವಿಚಕ್ರ ವಾಹನದಲ್ಲಿ ಸಾಗಿಸಿ ಗೆಳೆಯ ಮೀನಾಜುವುದ್ದೀನ್‌ಗೆ ಕೊಟ್ಟಿದ್ದಳು.

ಮನೆ ಕೆಲಸದಾಳು ಎಂಬ ಕಾರಣಕ್ಕೆ ಆಕೆಯ ಸ್ಕೂಟರ್ ಅನ್ನು ಕಾವಲುಗಾರರು ಸಹ ಪರಿಶೀಲಿಸಿರಲಿಲ್ಲ. ಮಾಲೀಕರು ಮನೆಗೆ ಬಂದಾಗ ಲಾಕರ್ ಕಳವು ಆಗಿರುವುದು ಗೊತ್ತಾಗಿ ಬೆಚ್ಚಿಬಿದ್ದಿದ್ದರು. ಈ ಕೃತ್ಯಕ್ಕೂ 3 ದಿನಗಳ ಮುನ್ನ ಬಿಹಾರ ಮೂಲದ ಕೆಲಸಗಾರ ಗೋವಿಂದನ್ ಎಂಬಾತ ಊರಿಗೆ ಹೋಗಿದ್ದ. ಈತನ ಮೇಲೆ ಆರಂಭದಲ್ಲಿ ಅನುಮಾನಗೊಂಡು ನಿತಿನ್, ಪೊಲೀಸರಿಗೆ ದೂರು ಕೊಟ್ಟಿದ್ದರು. ಅದರನ್ವಯ ಪಿಎಸ್‌ಐ ಅಶೋಕ್ ತಂಡ ಬಿಹಾರಕ್ಕೆ ತೆರಳಿ ಗೋವಿಂದನ್‌ನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದಾಗ ಆತನ ಪಾತ್ರ ಇಲ್ಲದೆ ಇರುವುದು ಸ್ಪಷ್ಪವಾಯಿತು.

ಬಳಿಕ ಮನೆಯ ಎಲ್ಲ ಕೆಲಸಗಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುನೈನಾ ಮತ್ತು ಚಂದನ್ ಪಾತ್ರ ಇರುವುದು ಬೆಳಕಿಗೆ ಬಂದಿತ್ತು. ಅಷ್ಟರಲ್ಲಿ ಮತ್ತೊಬ್ಬ ಆರೋಪಿ ಮೀನಾಜುವುದ್ದೀನ್ ತನ್ನ ಹುಟ್ಟೂರು ಅಸ್ಸಾಂಗೆ ಹೋಗಿದ್ದ. ಸುನೈನಾ ಮತ್ತು ಚಂದನ್‌ನನ್ನು ಬಂಧಿಸಿದ ಬಳಿಕ ಆತನನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ಕೇಳಿ ಸಿಕ್ಕಿಬಿದ್ದಳು :

ಆರು ಮನೆ ಕೆಲಸಗಾರರನ್ನು ವಿಚಾರಣೆ ನಡೆಸಿದ್ದ ಪೊಲೀಸರು, ಎಲ್ಲ ಮೊಬೈಲ್ ವಶಕ್ಕೆ ಪಡೆದು ಉದ್ಯಮಿ ನಿತಿನ್ ಕೈಗೆ ಕೊಟ್ಟಿದ್ದರು. ಆನಂತರ ಅವರಿಗೆ ರಹಸ್ಯವಾಗಿ ಯಾರು ಹೆಚ್ಚಿಗೆ ಮೊಬೈಲ್ ಕೇಳುತ್ತಾರೆ ಗಮನಿಸಿ ಮಾಹಿತಿ ನೀಡುವಂತೆ ಸಲಹೆ ನೀಡಿದ್ದರು. ಆಗ ಸುನೈನಾ, ಪದೇ ಪದೆ, ಮೊಬೈಲ್ ಬೇಕೆಂದು ಮಾಲೀಕರನ್ನು ಕೇಳುತ್ತಿದ್ದಳು. ಆಗ ಪೊಲೀಸರು ಆಕೆಯನ್ನು ಪ್ರತ್ಯೇಕವಾಗಿ ಕರೆಸಿ ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪೊಕೊಂಡಿದ್ದಾಳೆ. ಅಲ್ಲದೆ ವಿಲ್ಲಾದ ಕಾವಲುಗಾರರ ಮೊಬೈಲ್ ಪಡೆದು ತನ್ನ ಗೆಳೆಯನಿಗೆ ಕರೆ ಮಾಡಿದ್ದು ಸಹ ಬೆಳಕಿಗೆ ಬಂದಿದೆ.

ಚಿನ್ನ ಮಾರಿ ಕಾರು ಖರೀದಿ : ಮಾಲೀಕರ ಮನೆಯಲ್ಲಿ ಪ್ರೇಯಸಿ ನೀಡಿದ್ದ ಚಿನ್ನಾಭರಣವನ್ನು ಮೀನಾಜುವುದ್ದೀನ್ ನಗರದ ಆಭರಣ ಅಂಗಡಿಗೆ ಮಾರಾಟ ಮಾಡಿ ಬಂದ ಹಣದಲ್ಲಿ 7 ಲಕ್ಷ ರೂ. ಕೊಟ್ಟು ಕಾರು ಖರೀದಿ ಮಾಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net