

ದಾಂಡೇಲಿ: ಜೋಯಿಡಾ ತಾಲೂಕು ವ್ಯಾಪ್ತಿಯ ಬಿರ್ಯಂಪಾಲಿ ಗ್ರಾಮದ ಅಕೋಡಾದಲ್ಲಿ ಕಾಳಿ ನದಿಗೆ ಈಜಾಡಲು ತೆರಳಿದ ಹುಬ್ಬಳ್ಳಿ ಮೂಲದ ಒಂದೇ ಕುಟುಂಬಕ್ಕೆ ಸಂಬಂಧಿಸಿದ ಆರು ಜನ ಸಾವಿಗೀಡಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಉಳಿದ ಐವರು ಆಕೆಯನ್ನು ರಕ್ಷಣೆ ಮಾಡಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ಈಶ್ವರ ನಗರದ ನಜೀರ್ ಅಹ್ಮದ್ ಚಮನ್ ಸಾಬ್ ಹೊನ್ನಂಬಲ್ (40), ಅವರ ಮಕ್ಕಳಾದ ಅಲ್ಪೀಯಾ (10) ಮೊಹಿನ್ (6), ನಜೀರ್ ಅವರ ಸಹೋದರಿ ರೇಷ್ಮಾ ಉನ್ನಿಸಾ ತೌಫೀಕ್ ಅಹ್ಮದ್ (38), ಅವರ ಮಕ್ಕಳಾದ ಇಫ್ರಾ(15), ಅಬಿದ್ (12) ಮೃತರು.
ನಗರದ ಜಂಗಲ್ ಲಾಡ್ಜಸ್ ಹಾಗೂ ಸ್ಥಳೀಯರ ಸಹಕಾರದಲ್ಲಿ ಆರು ಜನರ ಶವಗಳನ್ನು ಮೇಲಕ್ಕೆ ಎತ್ತಲಾಗಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.