ಕದಿಯೋಕಂತಲೇ 3 ಬೈಕ್​ಗಳಲ್ಲಿ 6 ಮಂದಿ, 6 ಕಿ.ಮೀ. ಚೇಸ್ ಮಾಡಿದ್ರು; ಯಾರಿವರಾರು?

Car
Published on

ಬೆಂಗಳೂರು: ಮನೆಗೆ ಕನ್ನ ಹಾಕುವವರು ಇರುವಾಗ ಕಾರಿಗೆ ಕನ್ನ ಹಾಕುವವರು ಇರುವುದು ವಿಶೇಷವೇನಲ್ಲ. ಆದರೆ ಈ ಕಳ್ಳರು ಸಾಮಾನ್ಯರಲ್ಲ. ಈ ಆರು ಮಂದಿ ಮೂರು ಬೈಕ್​ಗಳಲ್ಲಿ ಆರು ಕಿ.ಮೀ. ದೂರದವರೆಗೆ ಚೇಸ್​ ಮಾಡಿ ಕಾರಿನ ಗಾಜು ಒಡೆದು ಕಳವು ಮಾಡಿದ್ದಾರೆ.

ಇಂಥದ್ದೊಂದು ಅಪರೂಪದ ಪ್ರಕರಣ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಇವರ ಖತರ್ನಾಕ್ ಗ್ಯಾಂಗ್​ನ ಕೃತ್ಯಕ್ಕೆ ಕೇರಳ ಮೂಲದ ಉದ್ಯಮಿ ಲಕ್ಷಾಂತರ ರೂಪಾಯಿ ಕಳೆದುಕೊಂಡಂತಾಗಿದೆ. ನ. 11ರಂದು ಈ ಪ್ರಕರಣ ನಡೆದಿದ್ದು, ಇದೀಗ ಬಹಿರಂಗಗೊಂಡಿದೆ.

ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಕೇರಳ ಮೂಲದ ಉದ್ಯಮಿ ಸಮೀಲ್ ಎಂಬುವವರ ಫಾರ್ಚೂನರ್ ಕಾರಿನ ಗಾಜು ಒಡೆದು ಈ ಗ್ಯಾಂಗ್ ಕಳ್ಳತನ ನಡೆಸಿದೆ. ಕಾರಿನಲ್ಲಿದ್ದ 6 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್​, 2.75 ಲಕ್ಷ ರೂ. ನಗದು, ಎಟಿಎಂ ಕಾರ್ಡ್, ಪಾಸ್​ಬುಕ್​ ಇದ್ದ ಚೀಲವನ್ನೇ ಈ ಕಳ್ಳರು ಹೊತ್ತೊಯ್ದು ಪರಾರಿಯಾಗಿದ್ದಾರೆ.

ನವೆಂಬರ್ 11ರಂದು ಸಮೀಲ್ ಕಲ್ಯಾಣನಗರದ ಐಸಿಐಸಿಐ ಬ್ಯಾಂಕ್​ಗೆ ಜಮೆ ಮಾಡಲು ಹಣವನ್ನು ತಂದಿದ್ದರು. ಆದರೆ ಬ್ಯಾಂಕ್ ಅವಧಿ ಮುಗಿದಿದ್ದರಿಂದ ಸಂಜೆ ಮನೆಗೆ ಹಣದೊಂದಿಗೆ ಮರಳುತ್ತಿದ್ದರು. ಈ ನಡುವೆ ಪ್ರಕರಣ ನಡೆದಿದ್ದು, ಬಾಣಸವಾಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net