

ರಟ್ಟಿಹಳ್ಳಿ: ತಾಲೂಕಿನ ಮಾಸೂರಿನ ಬಳಿ ಕುಮದ್ವತಿ ನದಿ ದಡದಲ್ಲಿ ಗೋವುಗಳನ್ನು ಹತ್ಯೆ ಮಾಡಿ, ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಟ್ಟಿಹಳ್ಳಿಯ ಖ್ವಾಜಾ ಶಂಶುದ್ದೀನ್ ಮೇಡ್ಲೇರಿ, ಶಹಬಾಜ್ ವಜೀರಸಾಬ ಮುಲ್ಲಾ, ಮಾಸೂರಿನ ಫಯಾಜ್ ರಾಣೆಬೆನ್ನೂರ, ಇರ್ಫಾನ್ ಮಾಸೂರು, ರಿಜ್ವಾನ್ ಮುಗಳಿಹಳ್ಳಿ, ಸಾಧಿಕ್ ಮೇಡ್ಲೇರಿ ಬಂಧಿತರು. ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರೇಕೆರೂರ ಪೊಲೀಸ್ ಠಾಣೆ ಪಿಎಸ್ಐ ನೀಲಪ್ಪ ನರಲಾರ್ ತಿಳಿಸಿದ್ದಾರೆ.
ತಾಲೂಕಿನ ಮಾಸೂರು ಗ್ರಾಮದಲ್ಲಿ ಕೋಟೆ ಓಣಿ ಹತ್ತಿರ ಇರುವ ಕುಮದ್ವತಿ ನದಿಯ ದಡದ ಬಳಿ ಒಂದೂವರೆ ವರ್ಷದ ಜರ್ಸಿ ತಳಿಯ ಹೋರಿ, ಎರಡು ವರ್ಷದ ಎಚ್ಎಫ್ ಮಿಶ್ರ ತಳಿಯ ಆಕಳು ಹತ್ಯೆ ಮಾಡಿ, ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಕುರಿತು ಸ್ಥಳೀಯರ ಮಾಹಿತಿ ಮೇರೆಗೆ ಹಿರೇಕೆರೂರ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ಮಾಡಿದ್ದರು. ಈ ವೇಳೆ ಆರೋಪಿಗಳು ಪರಾರಿಯಾಗಿದ್ದರು. ಸ್ಥಳದಲ್ಲಿದ್ದ ಗೋಮಾಂಸ ವಶಪಡಿಸಿಕೊಳ್ಳಲಾಗಿತ್ತು.
ವಿಹಿಂಪ, ಬಜರಂಗ ದಳದಿಂದ ಪ್ರತಿಭಟನೆ ಎಚ್ಚರಿಕೆ: ರಟ್ಟಿಹಳ್ಳಿ ತಾಲೂಕಿನಲ್ಲಿ ಅನೇಕ ಕಡೆ ಅಕ್ರಮವಾಗಿ ಕಸಾಯಿಖಾನೆ ಮತ್ತು ಕೆಲವೆಡೆ ಅನಧಿಕೃತವಾಗಿ ಗೋವುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಸಂಘಟನೆಯ ಕಾರ್ಯಕರ್ತರು ಖಚಿತ ಮಾಹಿತಿ ನೀಡಿದ ಬಳಿಕ ದಾಳಿ ಮಾಡಿ, ಪ್ರಕರಣ ದಾಖಲಿಸಲಾಗುತ್ತಿದೆ. ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ ಹಾಕದಿರುವುದರಿಂದ ಆರೋಪಿಗಳು ಮತ್ತೆ ಅಕ್ರಮವಾಗಿ ಗೋ ಮಾಂಸ ಮಾರಾಟ ಮುಂದುವರಿಸುತ್ತಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಜರುಗಿಸಿ, ಎಲ್ಲ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.