ಬಿಬಿಎಂಪಿ ಅಗ್ನಿ ಅವಘಡ: 6 ಮಂದಿ ಪ್ರಾಣಾಪಾಯದಿಂದ ಪಾರು

BBMP fire
Published on

ಬೆಂಗಳೂರು: ಪಾಲಿಕೆ ಕೇಂದ್ರ ಕಚೇರಿ ಆವರಣದ ‘ಗುಣ ನಿಯಂತ್ರಣ ಪ್ರಯೋಗಾಲಯ’ ಕಚೇರಿಯಲ್ಲಿ ಶನಿವಾರ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ 9 ಮಂದಿ ಪೈಕಿ 6 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮೂವರು ಸ್ಥಿತಿ ಗಂಭೀರವಾಗಿದೆ.

ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ ವಿಭಾಗದಲ್ಲಿ ಮೂವರ ಮೇಲೆ ನಿಗಾ ಇಟ್ಟಿರುವ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಕಾರ್ಯಪಾಲಕ ಅಭಿಯಂತರರಾದ ಸಂತೋಷ್ ಕುಮಾರ್, ವಿಜಯಮಾಲಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್, ಗಣಕಯಂತ್ರ ನಿರ್ವಾಹಕ ಮನೋಜ್ ಹಾಗೂ ಪ್ರಥಮ ದರ್ಜೆ ಸಹಾಯಕ ಸಿರಾಜ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಆದರೆ, ಮುಖ್ಯ ಅಭಿಯಂತರ ಶಿವಕುಮಾರ್, ಕಾರ್ಯಪಾಲಕ ಅಭಿಯಂತರ ಕಿರಣ್, ಆಪರೇಟರ್ ಜ್ಯೋತಿ ಅವರ ಆರೋಗ್ಯವು ತುಸು ಗಂಭೀರವಾಗಿದೆ. ಹೀಗಾಗಿ, ಕಿರಣ್‌ಗೆ ಮೂರು ಬಾರಿ ಡಯಾಲಿಸಿಸ್ ಮಾಡಲಾಗಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಜ್ಯೋತಿ, ಶಿವಕುಮಾರ್‌ಗೆ ಇನ್ನಷ್ಟು ಹೆಚ್ಚಿನ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಅಗ್ನಿ ಅನಾಹುತ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರು, ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಲ್ಹಾದ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಘಟಕದಲ್ಲಿ ಏನೇನು ಪರೀಕ್ಷೆ ನಡೆಸಲಾಗುತ್ತದೆ, ಏನೆಲ್ಲ ಮುನ್ನೆಚ್ಚರಿಕೆ ಕ್ರಮಗಳಿವೆ, ಯಾವ ಹಂತದ ಅಧಿಕಾರಿಗಳು ಪರೀಕ್ಷೆ ನಡೆಸಬೇಕಿತ್ತು ಎಂಬಿತ್ಯಾದಿ ವಿಚಾರಗಳ ಸಮಗ್ರ ಮಾಹಿತಿ ನೀಡುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಗೋದಾಮಿನ ತರಹ ಕಾಣುತ್ತಿದೆ. ಪ್ರಯೋಗಾಲಯದಲ್ಲಿ ಕನಿಷ್ಠ ಗಾಳಿ, ಬೆಳಕು ಇರಬೇಕು. ಆದರೆ, ಇಲ್ಲಿ ಅಂತಹ ವಾತಾವರಣ ಇಲ್ಲ. ಲ್ಯಾಬ್‌ನಲ್ಲಿ ಪ್ರಯೋಗ ನಡೆಯುತ್ತಿರುವಾಗಲೇ ಅಧಿಕಾರಿಗಳು ಸಭೆ ನಡೆಸುತ್ತಿದ್ದರು. ಸಭೆ ನಡೆಸಲು ಅನುಮತಿ ಕೊಟ್ಟವರಾರು ಎಂಬ ಪ್ರಶ್ನೆ ಸಹ ಹುಟ್ಟಿಕೊಂಡಿದೆ. ಸೋಮವಾರ ಪೊಲೀಸರ ನೋಟಿಸ್‌ಗೆ ಪಾಲಿಕೆ ಮುಖ್ಯ ಎಂಜಿನಿಯರ್ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಟೇಷನ್ ಬೇಲ್ ಮೇಲೆ ಬಿಡುಗಡೆ:

ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಆನಂದ್, ಸ್ವಾಮಿ, ಸುರೇಶ್ ಬಿಡುಗಡೆಯಾಗಿದ್ದು, ವಿಚಾರಣೆಗೆ ಕರೆದಾಗ ಮತ್ತೆ ಹಾಜರಾಗುವಂತೆ ಪೊಲೀಸರುಸೂಚಿಸಿದ್ದಾರೆ.

ಲ್ಯಾಬ್ ಟೆಕ್ನಿಶಿಯನ್ ಕೆಲಸ : ಪ್ರಯೋಗಾಲಯದಲ್ಲಿ ‘ಡಿ’ಗ್ರೂಪ್ ನೌಕರ ಸುರೇಶ್ ಎಂಬುವರು ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ರಾಸಾಯನಿಕ ವಸ್ತುಗಳ ಬಗ್ಗೆ ಇವರಿಗೆ ಮಾಹಿತಿಯಿಲ್ಲ. ಆದರೂ ಪ್ರತಿನಿತ್ಯ ಕ್ವಾಲಿಟಿ ಪರೀಕ್ಷೆ ಮಾಡುತ್ತಿದ್ದರು. ಆ ಜಾಗದಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆತಂಕಗೊಂಡ ಸುರೇಶ್ ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಆಗಲಿಲ್ಲ. ಬೆಂಕಿ ನಂದಿಸುವ ಬಗ್ಗೆ ಮಾಹಿತಿ ಗೊತ್ತಿಲ್ಲದ ಅವರು ನೀರು ಸುರಿದಿದ್ದರು. ಇದರಿಂದ ಬೆಂಕಿಯ ತೀವ್ರತೆ ಇನ್ನಷ್ಟು ಹೆಚ್ಚಾಗಿತ್ತು. ಇದರ ಪಕ್ಕದಲ್ಲೇ ನಾಲ್ಕು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಕೆಮಿಕಲ್ ಇರಿಸಲಾಗಿತ್ತು. ಬೆಂಕಿ ಶಾಖಕ್ಕೆ ಬಕೆಟ್‌ಗಳು ಕರಗಿವೆ. ಬೆಂಕಿ ಕೆನ್ನಾಲಿಗೆ ಹೆಚ್ಚಾದಾಗ ಪ್ರಾಣಿ ಉಳಿಸಿಕೊಳ್ಳಲು ಸುರೇಶ್ ಕಚೇರಿಯಿಂದ ಆಚೆ ಕಡೆಗೆ ಓಡಿ ಹೋಗಿದ್ದರು ಎನ್ನಲಾಗಿದೆ.

ಪಾಲಿಕೆಯಿಂದ ಚಿಕಿತ್ಸಾ ವೆಚ್ಚ ಪಾವತಿ: ಅವಘಡ ಕುರಿತಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಸರ್ಕಾರಕ್ಕೆ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ತನಿಖೆಗೆ ನಮ್ಮ ಅಧಿಕಾರಿಗಳ ಸಹ ಸ್ಪಂದಿಸುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ 9 ಮಂದಿ ಪೈಕಿ ಮೂವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯ ಅಭಿಯಂತರ ಶಿವಕುಮಾರ್‌ಗೆ ಶೇ.25 ಸುಟ್ಟ ಗಾಯವಾಗಿದೆ. ಸ್ಥಿತಿ ತುಸು ಗಂಭೀರವಾಗಿರುವ ಕಾರ್ಯಪಾಲಕ ಅಭಿಯಂತರ ಕಿರಣ್‌ಗೆ ಈಗಾಗಲೇ ಎರಡು ಬಾರಿ ಡಯಾಲೀಸಿಸ್ ಮಾಡಲಾಗಿದೆ. ಎಲ್ಲ ರೋಗಿಗಳ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ. ಡಿಟಿಪಿ ಆಪರೇಟರ್ ಜ್ಯೋತಿ ಮುಖಕ್ಕೆ ಗಾಯವಾಗಿದ್ದು, ಉಸಿರಾಟದ ಸಮಸ್ಯೆ ಉಂಟಾಗಿದೆ ಎಂದು ಮಾಹಿತಿ ನೀಡಿದರು. ಸುಟ್ಟ ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲು ನಿರ್ಧರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net