

ನೆಲಮಂಗಲ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಟಿ.ಬೇಗೂರು ಸಮೀಪ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರಿನ ಕಸವನಹಳ್ಳಿ ಸಿ.ಎಸ್.ಪಿ.ಬಡಾವಣೆಯಲ್ಲಿ ವಾಸವಿದ್ದ ಚಂದ್ರಮ ಹಿರಗೊಂಡ ಹೆಗಪ್ಪಗೋಳ್ (44), ಪತ್ನಿ ಗೌರಬಾಯಿ(33), ಪುತ್ರ ಗ್ಯಾನ್(15), ಪುತ್ರಿ ದೀಕ್ಷಾ(12) ಹಾಗೂ
ಸಹೋದರನ ಪತ್ನಿ ವಿಜಯಲಕ್ಷ್ಮೀ(36), ಪುತ್ರಿ ಆರ್ಯಾ(6) ಮೃತರು.
ಚಂದ್ರಮ ಹಾಗೂ ಕುಟುಂಬ ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮರುಬಿಗಿ ಗ್ರಾಮದವರು. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಚಂದ್ರಮ 10 ವರ್ಷದಿಂದ ಬೆಂಗಳೂರಿನ ಕಸವನಹಳ್ಳಿ ಸಿ.ಎಸ್.ಪಿ.ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಎಚ್‌ಎಸ್‌ಆರ್ ಬಡಾವಣೆಯಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್ ಕಂಪನಿಯ ಕಾರ್ಯನಿರ್ವಾಹಕರಾಗಿದ್ದರೆ, ಸಹೋದರ ಡಾ.ಮಲ್ಲಿನಾಥ್ ತಕ್ಕಲಕಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಸಹೋದರರಿಬ್ಬರೂ ಕುಟುಂಬದೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಡಿಕ್ಕಿ ತಪ್ಪಿಸುವ ಧಾವಂತದಲ್ಲಿ ಅವಘಡ
ಮುಂದೆ ಬಂದ ಕಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ಕಂಟೇನರ್ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಮತ್ತೊಂದು ರಸ್ತೆಗೆ ನುಗ್ಗಿ ಲಾರಿಗೆ ಡಿಕ್ಕಿ ಆಯಿತು. ಅದೇ ವೇಳೆ ಕಾರಿನ ಮೇಲೆ ಪಲ್ಟಿಯಾಗಿದೆ. ಮತ್ತೆ ನನಗೆ ಏನಾಯಿತು ಗೊತ್ತಿಲ್ಲ. ಆಸ್ಪತ್ರೆಗೆ ಬಂದಾಗ ನನಗೆ ಎಚ್ಚರಿಕೆ ಆಗಿದೆ ಎಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಟೇನರ್ ಚಾಲಕ ಅನ್ಸಾರಿ ತಿಳಿಸಿದರು.
ಕುಟುಂಬಸ್ಥರ ಆಕ್ರಂದನ
ವಿಧಿಯಾಟಕ್ಕೆ ಒಂದೇ ಕುಟುಂಬದ ಆರು ಮಂದಿ ಕೊನೆಯುಸಿರೆಳೆದಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಸಮೀಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತದೇಹ ಹಸ್ತಾಂತ
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಡಿ.22 ರಂದು ಮಧ್ಯಾಹ್ನ ಮೃತರ ಸ್ವಗ್ರಾಮ ಮರುಬಿಗಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಲಾರಿ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ನಗರ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.
ರಜೆಯ ಸಂತಸ ಕಸಿದ ಜವರಾಯ
ಮಕ್ಕಳಿಗೆ ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಸ್ವಗ್ರಾಮ ಮರುಬಿಗಿಗೆ ಶನಿವಾರ ಕುಟುಂಬ ಸಮೇತ ತೆರಳುತ್ತಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 48ರ ಟಿ.ಬೇಗೂರು ಸಮೀಪ ಕಾರಿನ ಮೇಲೆ ಕಂಟೇನರ್ ಪಲ್ಟಿ ಹೊಡೆದಿದೆ. ಈ ವೇಳೆ ಕಾರು ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ: ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಅಲ್ಯುಮಿನಿಯಂ ವಸ್ತು ತುಂಬಿದ್ದ ಕಂಟೇನರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬರುತ್ತಿದ್ದ ಸರಕು ಸಾಗಣೆ ವಾಹನಕ್ಕೆ ಡಿಕ್ಕಿಯಾಗಿ ಕಾರಿನ ಮೇಲೆ ಪಲ್ಟಿಯಾಗಿದೆ. ಈ ಪರಿಣಾಮ ಕಾರು ಸಂಪೂರ್ಣ ಅಪ್ಪಚ್ಚಿ ಆಗಿದೆ.
ಒಂದು ಗಂಟೆ ಕಾರ್ಯಾಚರಣೆ: ಘಟನೆ ಹಿನ್ನೆಲೆಯಲ್ಲಿ ಕಂಟೇನರ್ ಕೆಳಗೆ ಸಿಲುಕಿದ್ದ ಕಾರನ್ನು ಹಾಗೂ ಮೃತದೇಹಗಳನ್ನು ನಗರ ಸಂಚಾರ ಠಾಣೆ ಪೊಲೀಸರು, ಆಗ್ನಿ ಶಾಮಕ ಠಾಣೆ, ಟೋಲ್ ಸಿಬ್ಬಂದಿ ಸೇರಿ ಮೂರು ಕ್ರೇನ್ ಸಹಕಾರದಿಂದ ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೊರ ತೆಗೆದರು. ಮೃತದೇಹಗಳನ್ನು ನಗರದ ಸಾರ್ವಜನಿಕ ಅಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಐಜಿಪಿ ಲಾಬೂರಾಮ್, ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಡಿವೈಎಸ್‌ಪಿ ಜಗದೀಶ್ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ತಿಂಗಳ ಹಿಂದೆ ಖರೀದಿಸಿದ್ದ ಕಾರು
ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಚಂದ್ರಮ ಅವರದು ಶ್ರೀಮಂತ ಕುಟುಂಬವಾಗಿದ್ದು, ಸ್ನೇಹಿತರು ಹಾಗೂ ಸಂಬಂಧಿಕರ ನಿರ್ದೇಶನದಂತೆ ಅತ್ಯಂತ ಸುರಕ್ಷತಾ ವ್ಯವಸ್ಥೆ ಹೊಂದಿದ್ದ ವೋಲ್ವೋ ಕಂಪನಿಯ ಕಾರನ್ನು ಎರಡು ತಿಂಗಳ ಹಿಂದೆ ಖರೀದಿ ಮಾಡಿದ್ದರು ಎಂದು ಕುಟುಂಬಸ್ಥರು ತಿಳಿಸಿದರು
ತನಿಖೆ ಶುರು
ಕಾರಿನಲ್ಲಿ ತೆರಳುತ್ತಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾರ ತಪ್ಪು ಅನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರವಲಯ ಐಜಿಪಿ ಲಾಬೂರಾಮ್ ತಿಳಿಸಿದರು.
ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್‌ನ ಸಿಇಒ
ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್‌ನ ಸಿಇಒ ಆಗಿದ್ದ ಚಂದ್ರಮ, ಆಟೋಮೋಟಿವ್, ಎಂಬೆಡೆಡ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ 18 ವರ್ಷಗಳಿಂದ ತೊಡಗಿಸಿಕೊಂಡಿದ್ದರು. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಸುರತ್ಕಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದುಕೊಂಡಿದ್ದರು. ಹೊಸ ಆಫೀಸ್ ಓಪನ್ ಮಾಡಲು ನಿರ್ಧರಿಸಿದ್ದರು. ಹೊಸ ಆಫೀಸ್ ಕೆಲಸವು ನಡೆಯುತ್ತಿತ್ತು. ಶುಕ್ರವಾರ ರಾತ್ರಿ ಸಿಬ್ಬಂದಿ ಜತೆ ಮೀಟಿಂಗ್ ಮಾಡಿದ್ದರು. ಕೆಲ ದಿನಗಳು ಬರುವುದಿಲ್ಲ ಎಂದು ಹೇಳಿ ಹೋಗಿದ್ದರು. 2018ರಲ್ಲಿ ಶುರುವಾಗಿದ್ದ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.