ಶಿಕ್ಷಕಿ ಸೇರಿ ಇಬ್ಬರಿಗೆ ಆರು ಲಕ್ಷ ರೂ. ವಂಚನೆ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆ ವರ್ಗಾವಣೆ

shimogga rural police station
ಶಿವಮೊಗ್ಗ ಗ್ರಾಮಾಂತರ ಠಾಣೆ
Published on

ಶಿವಮೊಗ್ಗ: ಮಠದ ಮ್ಯಾನೇಜರ್ ಎಂದು ಹೇಳಿಕೊಂಡ ಅಪರಿಚಿತರಿಬ್ಬರು ಶಿಕ್ಷಕಿ ಸೇರಿ ಇಬ್ಬರು ಮಹಿಳೆಯರಿಗೆ ಆರು ಲಕ್ಷ ರೂ. ವಂಚನೆ ಮಾಡಿದ್ದು ಇದೀಗ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆ ಮೆಟ್ಟಿಲೇರಿದೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಶಿಕ್ಷಕಿ ಮತ್ತು ಆಕೆಯ ಸ್ನೇಹಿತೆ ವಂಚನೆಗೆ ಒಳಗಾದವರು. ಕಳೆದ ಮೇ ತಿಂಗಳಲ್ಲಿ ಶಿಕ್ಷಕಿಗೆ ಕರೆ ಮಾಡಿದ್ದ ಅಪರಿಚಿತರು 500 ರೂ. ಮುಖಬೆಲೆಯ ನೋಟುಗಳನ್ನು ನೀಡಿದರೆ 100 ರೂ.ನ ಎರಡು ಪಟ್ಟು ಹಣ ನೀಡುವುದಾಗಿ ನಂಬಿಸಿದ್ದರು.
ಇದೇ ರೀತಿ ತಾವು ನಿವೇಶನ ಮತ್ತು ಚಿನ್ನಾಭರಣ ಖರೀದಿ ಮಾಡಿರುವುದಾಗಿ ಶಿಕ್ಷಕಿಗೆ ಹೇಳಿದ್ದರು. ಇದನ್ನು ನಂಬಿದ ಶಿಕ್ಷಕಿ ತನ್ನ ಸ್ನೇಹಿತೆಗೂ ಈ ವಿಚಾರ ತಿಳಿಸಿದ್ದಳು. ಹಣದ ಆಸೆಯಿಂದ ಇಬ್ಬರು ತಲಾ 3 ಲಕ್ಷ ರೂ. ಹೊಂದಿಸಿಕೊಂಡು ಅಪರಿಚಿತರಿಗೆ ಕರೆ ಮಾಡಿದ್ದರು. ಇಬ್ಬರಿಗೂ ತಲಾ ಆರು ಲಕ್ಷ ರೂ. ನೀಡುವುದಾಗಿ ಅಪರಿಚಿತರು ನಂಬಿಸಿದ್ದರು.
ಇಬ್ಬರನ್ನೂ ಶಿವಮೊಗ್ಗ ಜಿಲ್ಲೆ ಸಾಗರಕ್ಕೆ ಬರಲು ಹೇಳಿದ್ದ ಅಪರಿಚಿತರು ಬೈಕ್‌ನಲ್ಲಿ ಅಲ್ಲಿಗೆ ತೆರಳಿದ್ದರು. ಅಲ್ಲಿಂದ ಶಿಕ್ಷಕಿ ಮತ್ತು ಆಕೆಯ ಸ್ನೇಹಿತೆಯನ್ನು ಕುಂಸಿ ಬಳಿ ಕರೆದುಕೊಂಡು ಬಂದು ತಾವು ತಂದಿದ್ದ ಬಾಕ್ಸ್‌ನಿಂದ ಕೆಲವರು 100 ರೂ. ಮುಖಬೆಲೆಯ ಏಳೆಂಟು ಅಸಲಿ ನೋಟು ತೋರಿಸಿ ಆರು ಲಕ್ಷ ರೂ. ಪಡೆದು ಜಾಗ ಖಾಲಿ ಮಾಡಿದ್ದರು.
ಬಳಿಕ ಇಬ್ಬರು ಮಹಿಳೆಯರು ಹಣವಿದ್ದ ಬಾಕ್ಸ್ ಅನ್ನು ಕುಮಟಾ ತಾಲೂಕಿನ ತೊರ್ಕೆ ಗ್ರಾಮಕ್ಕೆ ತಂದು ಪರಿಶೀಲಿಸಿದಾಗ ಅದರಲ್ಲಿ 100 ರೂ. ಮುಖಬೆಲೆಯ 15, 000 ರೂ ಅಸಲಿ ನೋಟುಗಳಿದ್ದವು. ಉಳಿದವು ರದ್ದಿ ಪೇಪರ್ ಹಾಗೂ ಚೂರುಗಳಿದ್ದವು. ಮೋಸ ಹೋದ ಬಗ್ಗೆ ಮಹಿಳೆಯರು ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಗೋಕರ್ಣ ಠಾಣೆಯಿಂದ ವಂಚನೆ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net