ಮತ್ತೆ ಹೊಸ ಬಾಳಿಗೆ ಹೆಜ್ಜೆ ಇರಿಸಿದ 6 ಜೋಡಿ

12kolar6- adalath
Published on

ಕೋಲಾರ: ಜಿಲ್ಲೆ ಸೇರಿ ವಿವಿಧ ತಾಲೂಕು ನ್ಯಾಯಾಲಯಗಳಲ್ಲಿ ಶನಿವಾರ ನಿಗದಿಪಡಿಸಿದ್ದ ಲೋಕ ಅದಾಲತ್​ನಲ್ಲಿ ಒಟ್ಟು 1,56,860 ವಿವಿಧ ರೀತಿಯ ಪ್ರಕರಣಗಳು ಇತ್ಯರ್ಥಗೊಂಡಿದ್ದು, ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ್ದ 6 ಜೋಡಿ ರಾಜೀ ಸಂಧಾನ ಮೂಲಕ ಮತ್ತೆ ಹೊಸ ಬಾಳಿಗೆ ಹೆಜ್ಜೆ ಹಾಕಿದರು.

ಜಿಲ್ಲಾ ನ್ಯಾಯಾಲಯದಲ್ಲಿನ ಜಿಲ್ಲಾ ಕೌಂಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗಿದ್ದ 6 ವಿಚ್ಛೇದನ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗೇಗೌಡ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್​ ನೇತೃತ್ವದಲ್ಲಿ ಇತ್ಯರ್ಥಗೊಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದು, 6 ಜೋಡಿ ಮತ್ತೆ ನವಜೀವನ ನಡೆಸಲು ಸಾಥ್​ ನೀಡಿದರು.

ಲೋಕ ಅದಾಲತ್​ನಲ್ಲಿ ಜಿಲ್ಲೆಯ ಎಲ್ಲ ಆರು ತಾಲೂಕುಗಳಿಂದ 1,56,860 ಪ್ರಕರಣಗಳು ರಾಜೀ ಸಂಧಾನದ ಮೂಲಕ ವಿಲೇವಾರಿ ಮಾಡಲಾಗಿದ್ದು, 17,26,75,587 ರೂ.ಮೊತ್ತ ಪರಿಹಾರ ಕಲ್ಪಿಸಲಾಗಿದೆ. ವಕೀಲರ ಮಧ್ಯಸ್ಥಿಕೆಯಲ್ಲಿ ಅಪಘಾತ ಪ್ರಕರಣ, ಕೌಟುಂಬಿಕ ದೌರ್ಜನ್ಯ, ಚೆಕ್​ಬೌನ್ಸ್​ ಪ್ರಕರಣ, ವಾಣಿಜ್ಯ ಕಲಹ ಪ್ರಕರಣ, ಸೇವಾ ವಿಷಯದ ಪ್ರಕರಣ, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್​ ಪ್ರಕರಣ, ಗ್ರಾಹಕರ ವ್ಯಾಜ್ಯ, ಸಾಲ ಮರುಪಾವತಿ ವ್ಯಾಜ್ಯ, ವಿಭಾಗದ ದಾವೆ, ಎವಿಕ್ಷನ್​ ದಾವೆ, ಭೂಸ್ವಾಧಿನ ದಾವೆ, ಇತರ ಸಿವಿಲ್​ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಯಿತು.

ಅದಾಲತ್​ನಲ್ಲಿ ಜಿಲ್ಲಾ ನ್ಯಾಯಾಲಯದ ಎಲ್ಲ ನ್ಯಾಯಾಧೀಶರು ಉಪಸ್ಥಿತರಿದ್ದು, ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಕಾರ್ಯದರ್ಶಿ ಬೈರಾರೆಡ್ಡಿ, ಉಪಾಧ್ಯಕ್ಷ ರವೀಂದ್ರಬಾಬು, ಖಜಾಂಚಿ ನವೀನ್​ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net