

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸುತ್ತಿದ್ದು, ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೆ 3 ಚೆಕ್ ಪೋಸ್ಟ್ಗಳಲ್ಲಿ ದಾಖಲೆ ಇಲ್ಲದ ಒಟ್ಟು 6,89,500 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕುಂದಗೋಳ ಕ್ರಾಸ್ ಬಳಿಯ ಚೆಕ್ಪೋಸ್ಟ್ನಲ್ಲಿ ಗುರುವಾರ ರಾತ್ರಿ ಅದರಗುಂಚಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕಾರು ತಪಾಸಣೆ ನಡೆಸಿದಾಗ ಅದರಗುಂಚಿ ಗ್ರಾಮದ ಮಲ್ಲಿಕಾರ್ಜುನ ಬೇಗೂರ ಅವರ ಬಳಿ ಸರಿಯಾದ ದಾಖಲೆ ಇಲ್ಲದ 2,10,000 ರೂ. ಹಣ ಪತ್ತೆಯಾಗಿದೆ. ಸರಿಯಾದ ದಾಖಲೆ ನೀಡದ ಮತ್ತು ಅಧಿಕಾರಿಗಳು ವಿಚಾರಿಸಿದಾಗ ಸಮಂಜಸ ಉತ್ತರ ನೀಡದ ಕಾರಣ ಹಣವನ್ನು ಜಪ್ತಿ ಮಾಡಲಾಗಿದೆ.
*ಸಂಗಟಿಕೊಪ್ಪ ಚೆಕ್ಪೋಸ್ಟ್: ಹುಬ್ಬಳ್ಳಿ& ಕಾರವಾರ ರಸ್ತೆಯ ಸಂಗಟಿಕೊಪ್ಪ ಚೇಕ್ಪೋಸ್ಟ್ನಲ್ಲಿ ಗುರುವಾರ ರಾತ್ರಿ ಕಾರವಾರದಿಂದ ಹುಬ್ಬಳ್ಳಿ ಕಡೆಗೆ ಆಗಮಿಸಿದ ಇನ್ನೋವಾ ಕಾರು ತಾಪಾಸಣೆ ಮಾಡಿದಾಗ ದಾಖಲೆ ಇಲ್ಲದ 1,09,500 ರೂ. ನಗದು ಪತ್ತೆಯಾಗಿದೆ. ಶಿರಸಿಯ ಸತ್ಯಂ ಎಸ್.ವಿ. ಎಂಬುವವರು ಸೂಕ್ತ ದಾಖಲೆ ಇಲ್ಲದೆ ಹಣ ಒಯ್ಯುತ್ತಿದ್ದ ಕಾರಣ ಜಪ್ತಿ ಮಾಡಲಾಗಿದೆ.
*ಕೃವಿವಿ ಚೆಕ್ಪೋಸ್ಟ್: ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ಬಳಿಯ ಚೆಕ್ಪೋಸ್ಟ್ನಲ್ಲಿ ಶುಕ್ರವಾರ ಬೆಳಗ್ಗೆ 3.70 ಲಕ್ಷ ರೂ. ಪತ್ತೆಯಾಗಿದೆ. ಅಥಣಿಯಿಂದ ಧಾರವಾಡಕ್ಕೆ ಆಗಮಿಸಿದ ಕಾರಿನಲ್ಲಿ ಮಲ್ಲಿಕಾರ್ಜುನ ಬಶೆಟ್ಟೆಪ್ಪ ಹೊಳ್ಳದಮಠ ಎಂಬುವವರ ಬಳಿ ದಾಖಲೆ ಇಲ್ಲದ 3.70 ಲಕ್ಷ ರೂ. ಪತ್ತೆಯಾಗಿದೆ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.